ಕಳೆದ ಆಗಸ್ಟ್, ಸೆಪ್ಟೆಂಬರ್‍ನಲ್ಲಿ ಅಮ್ಮನ ಜೊತೆಗೆ ಇಂಡಿಯಾಗೆ ಹೋಗಿದ್ದ ನಿಶು, ಅಲ್ಲಿ ಮಾಡಿದ ಮೋಜು-ಮಸ್ತಿಗಳ ಚಿತ್ರ ಸರಣಿ ಈಗ ಶುರು. ಅಜ್ಜಿ-ತಾತನ ಮನೆಯಲ್ಲಿ ಒಂದಿನ ಏನಾಯ್ತು ಗೊತ್ತ?
ನಿಶೂಗೆ ಇವತ್ತಿಗೆ ನಾಲ್ಕು ವರ್ಷ! ನಿಶು ಎಷ್ಟು ದೊಡ್ಡವನಾದ್ರೂ ಅವನ ಇವತ್ತಿನ ಮಗುತನ, ಕುತೂಹಲ, ಪ್ರೀತಿ, ಉತ್ಸಾಹ ಎಲ್ಲ ಯಾವತ್ತಿಗೂ ಅವನ ಜೊತೆಗೇ ಇರಲಿ ಅಂತ ಅಪ್ಪ, ಅಮ್ಮನ ಹಾರೈಕೆ, ನಿಮ್ಮ ಹಾರೈಕೆಗಳ ಜೊತೆಗೆ.
ಹುಟ್ಟಿದ ಹಬ್ಬದ ದಿನ ನಿನ್ನ ಬ್ಲಾಗ್‍ನಲ್ಲಿ ಏನು ಹಾಕೋದು ಅಂತ ಅಮ್ಮ ಕೇಳಿದಾಗ, ತನ್ನದೊಂದು ಫೇವರೆಟ್ ಹಾಡು ಹಾಡಿ ಅದರ ವೀಡಿಯೋ ಹಾಕಲು ನಿಶೂನೇ ಹೇಳಿದ್ದು. ನಿಶು ಪ್ರೀತಿಯ ಜಯಂತ್ ಅಂಕಲ್ ಮತ್ತು ರಘು ಬರೆದು, ರಘು ಅಂಕಲ್ ಹಾಡಿರೋ ಈ ಹಾಡು ಈಗ ಇಲ್ಲಿದೆ. (ಅಂದ ಹಾಗೆ ನಾವೆಲ್ಲ ಗಿಟಾರ್‍ಪತಿ ಅಂತಲೇ ಕರೀತಿದ್ದ ನಮ್ಮ ಮೈಸೂರಿನ ಹುಡುಗ, ನನ್ನ ಫ್ರೆಂಡ್ ರಘುಪತಿ ದೀಕ್ಷಿತ್ ಈಗ ಬೆಳೆದಿರೋ ಎತ್ತರ ನೋಡಿದರೆ, ಖುಷಿಯಿಂದ ಮನಸ್ಸು ತುಂಬಿ ಬರುತ್ತದೆ. ಸಧ್ಯದಲ್ಲೇ ರಘು ಮೇಲೆ ಒಂದು ಪೋಸ್ಟ್ ನಿಶೂಮನೆಯಲ್ಲಿ ಹಾಕುವ ಆಸೆ ಇದೆ.)
ಈ ಹಾಡಿನ ಸಾಹಿತ್ಯ :
ಪ್ರೀತಿಯ, ಮನಶಾಂತಿಯ, ಸಿರಿಹೊನ್ನಿನ ನಾಡಿದು
ಹಸಿರು ವನಗಳ, ತಂಪು ನದಿಗಳ ಸುಂದರ ಬೀಡಿದು
ಲೋಕವೇ ಒಂದಾಗುವಾ ಸಂಗಮ, ಭೇದವೇ ಇಲ್ಲದ ಹಿರಿತನ
ನಾಳಿನಾ ಹೊಸ ಆಶಾಕಿರಣ
ನಮ್ಮ ನಾಡು, ಕರುನಾಡು.
ಕಡಲಿನ, ಮಲೆ ಮಡಿಲಿನ, ಬಿಸಿ ಬಯಲಿನಾ ನಾಡಿದು
ಬೆವರ ಹನಿಗಳು, ವಿವಿಧ ದನಿಗಳು ಎಳೆಯುವಾ ತೇರಿದು
ಙ್ಞಾನದ ಪರಿತಾನದ ಹಂಬಲ, ಚಿಗುರಿಗೆ ಬೇರಿನ ಬೆಂಬಲ
ಮಮತೆಯ,ಸಮತೆಯ ಅಂಗಳ
ನಮ್ಮ ನಾಡು, ಕರುನಾಡು.
***
ಅಂದ ಹಾಗೆ, ‘ಸರ್ವಮಂಗಳ’ ಚಿತ್ರದಲ್ಲಿರುವ ಈ ಹುಟ್ಟುಹಬ್ಬದ ಹಾಡು ನೋಡಿದೀರಾ? ಇಲ್ಲ ಅಂದ್ರೆ ಈಗ್ಲೇ ನೋಡಿಬಿಡಿ. ಈ ದಿನ ಹುಟ್ಟಿದ ಹಬ್ಬ ಆಚರಿಸಿಕೊಳ್ತಿರುವ ಎಲ್ಲ ಮಕ್ಕಳಿಗೂ ಈ ಹಾಡು.