Tuesday, April 21, 2009

Little piggy

ಇನ್ನೂ ವರ್ಷವೂ ತುಂಬಿರದಿದ್ದ ನಿಶೂನ ಈ ಪುಟ್ಟ ಪಾದಗಳ ಒಂದೊಂದೇ ಬೆರಳು ಹಿಡಿದು, ‘ದಿಸ್ ಲಿಟಲ್ ಪಿಗ್ಗಿ...’ ಎಂದು ನಾನು ಹಾಡುತ್ತಿದ್ದಾಗ, ದೂರಿಯಾಡುತ್ತಾ ತನ್ನ ಕಾಲ್ಬೆರಳುಗಳನ್ನ ತಾನೂ ಹಿಡಿಯುವ ಆಟ ಆಡುತ್ತಿದ್ದ ಈ ಮಗುವಿಗೆ ಮುಂದಿನ ತಿಂಗಳಿಗೆ ನಾಲ್ಕು ವರ್ಷ ತುಂಬಲಿದೆ. ಈಗಲೂ ನಿಶೂಗೆ ಈ ಹಾಡು ಇಷ್ಟ. ಅಮ್ಮನೋ, ಅಪ್ಪನೋ ತನ್ನ  ಕೈ, ಕಾಲು ಬೆರಳಿನ ಉಗುರು ಕತ್ತರಿಸುವಾಗ ತಾನೇ ಹಾಡುತ್ತಾನೆ. ಅಮ್ಮನ ದೆಸೆಯಿಂದ ಈ ಲಿಟಲ್ ಪಿಗ್ಗಿ ಈಗ ಹಂದಿಮರಿ ಆಗಿರೋದಲ್ಲದೆ, ಇಂಗ್ಲಿಷ್ ರೈಮ್‍ನಲ್ಲಿ ಅತ್ತ ಹಾಗೆ ವೀ ವೀ ಅಂತ ಅಳದೆ, ಕನ್ನಡದಲ್ಲಿ ಆನಂದವಾಗಿ ಅಹ್ಹಹ್ಹಹ್ಹಾ...ಅಂತ ಅಟ್ಟಹಾಸ ಮಾಡ್ತಿದೆ. ನೀವೇ ನೋಡಿ ಬೇಕಿದ್ರೆ....





This little piggy went to market,
This little piggy stayed at home,
This little piggy had some pizza,
This little piggy had none.
And this little piggy went 'Wee wee wee' all the way home...


ಈ ಹಂದಿಮರಿ ಹೋಯ್ತು ಮಾರುಕಟ್ಟೆಗೆ


ಈ ಹಂದಿಮರಿ ಉಳೀತು ಮನೆಯೊಳಗೆ


ಈ ಹಂದಿಮರಿ ತಿಂತು ಕಡ್ಲೆ-ಬೆಲ್ಲ


ಈ ಹಂದಿಮರೀಗ್ ಪಾಪ ಏನೂ ಇಲ್ಲ

ಈ ಹಂದಿಮರಿ ಯಾಕೊ ಸುಮ್‍ಸುಮ್ನೆ ನಗ್ತಾ ಇತ್ತು
 ಅಹ್ಹಹ್ಹಹ್ಹ ಹಹ್ಹಹ್ಹಹ್ಹ ಹಾ!  

***

ವೀಡಿಯೋನೂ ನೋಡ್ತೀರ?


Saturday, February 14, 2009

ಹ್ಯಾಪಿ ವ್ಯಾಲಂಟೈನ್ಸ್ ಡೇ....

ನಿಶು ಸ್ಕೂಲಿನಲ್ಲಿ ಒಂದು ವಾರದಿಂದ ವ್ಯಾಲಂಟೈನ್ಸ್ ಡೇ ದಿನದ ಸಂಭ್ರಮ. ವಾರದ ಕೊನೆಯಲ್ಲಿ ಬರುವ ಈ ಪ್ರೀತಿಯ ದಿನಕ್ಕಾಗಿ ಮಕ್ಕಳು ದಿನಕ್ಕೊಂದು ಬಣ್ಣ ಬಣ್ಣದ ಚಿತ್ರ, ಕ್ರಾಪ್ಗ್ಟ್ಸ್ ಎಲ್ಲ ಮಾಡಿದ್ದರು. ನಿಶು ಮಾಡಿದ್ದ ಕ್ರಾಫ್ಟ್ಗಳಲ್ಲಿ ಕೆಲವು ಇಲ್ಲಿದೆ.



ನಾನು ಸ್ಕೂಲಿಗೆ ಹೋದಾಗ, ನೀನು ನನ್ನ ಮಿಸ್ ಮಾಡ್ತೀಯಲ್ಲ ಅಮ್ಮ...ಅದಕ್ಕೆ ನಿಂಗೆ ಇದು ...





ಇದು ಹಗ್ಸ್ ಅಂಡ್ ಕಿಸ್ಸೆಸ್ ಅಮ್ಮಾ.....




ಇದು ನನ್ನ ವ್ಯಾಲಂಟೈನ್ಸ್ ಡೇ ಬೆಕ್ಕಿನ ಮರಿ...



....ಮತ್ತೆ ಇದು....ನಿಂಗೆ, ಅಪ್ಪಂಗೆ, ಎಲ್ರಿಗೂ...ಐ ಲವ್ ಯೂ.......
*********



ಅಮೆರಿಕದಲ್ಲಿ ವ್ಯಾಲಂಟೈನ್ಸ್ ಡೇ ಕೇವಲ ‘ಪ್ರೇಮಿಗಳ ದಿನ’ ಅಲ್ಲ, ‘ಪ್ರೀತಿಯ ದಿನ’. ಪುಟ್ಟ ಮಕ್ಕಳು, ದೊಡ್ಡವರು ಎಲ್ಲರೂ ತಮ್ಮ ಪ್ರೀತಿಪಾತ್ರರಿಗೆ ‘ಐ ಲವ್ ಯು’ ಹೇಳುತ್ತಾ ಆಚರಿಸುವ ದಿನ. ಮಕ್ಕಳಿಗೆ ನಾವು ಕೊಡಬಹುದಾದ, ಅವರ ಬದುಕಿನುದ್ದಕ್ಕೂ ಉಳಿಯುವ, ಕಾಪಾಡುವ ಕೆಲವೇ ಉಡುಗೊರೆಗಳಲ್ಲಿ ಪ್ರೀತಿಯೂ ಒಂದು ಎನ್ನುವುದು ನನ್ನ ನಂಬಿಕೆ. ಈ ಬಗ್ಗೆ ಇವತ್ತಿನ ಕೆಂಡಸಂಪಿಗೆಯಲ್ಲಿ ನಾನು ಬರೆದ ಬರಹ ಇಲ್ಲಿದೆ. ನಿಮ್ಮೆಲ್ಲರಿಗೂ ‘ಹ್ಯಾಪಿ ವ್ಯಾಲಂಟೈನ್ಸ್ ಡೇ’.
೧೦ ತಿಂಗಳ ನಿಶು ತನ್ನ ಗೊಂಬೆಗಳ ಮೇಲೆ, ಅಪ್ಪ-ಅಮ್ಮನ ಮೇಲೆ ಪ್ರೀತಿಯ ಧಾರೆ ಹರಿಸುತ್ತಾ, ಸಂಭ್ರಮಿಸುತ್ತಾ ಇದ್ದ ದಿನಗಳಲ್ಲಿ ತೆಗೆದ ಒಂದು ವೀಡಿಯೋ ತುಣುಕು ಇಲ್ಲಿದೆ....ನಿಮಗಾಗಿ.



Saturday, January 10, 2009

Pumpkin patch visit - Oct 08

ಕಳೆದ ಅಕ್ಟೊಬರ್‍ನಲ್ಲಿ ಒಂದು ದಿನ ಸ್ಕೂಲ್‍ಬಸ್ ಹತ್ತಿ, ನಿಶು ಮತ್ತವನ ಒಂದಷ್ಟು ಸ್ನೇಹಿತರು ಕುಂಬಳಕಾಯಿ ತರಲಿಕ್ಕೆ ಅಂತ ಇಲ್ಲೊಂದು ಫಾರ್ಮ್‍ಗೆ ಹೋಗಿದ್ರು. ಅಲ್ಲಿ ಕುಂಬಳಕಾಯಿಯ ಜೊತೆಗೇ ಬೇರೆ ಬೇರೆ ತರಕಾರಿಗಳೂ ಇದ್ವು. ಹತ್ತಿರ ಹೋಗಿ ಮುಟ್ಟಬಹುದಾದ ಪುಟಾಣಿ ಮರಿಗಳಿರುವ pet zoo ಇತ್ತು. ಟ್ರಾಕ್ಟರ್ ಹತ್ತಿ, ಹುಲ್ಲಿನ ಪಿಂಡಿಗಳ ಮೇಲೆ ಕುಳಿತು ಫಾರ್ಮ್ ಪೂರಾ ಸುತ್ತಿ ಸುಸ್ತಾಗಿ, ಮನೆಯಿಂದ ತಂದ ಬುತ್ತಿ ತಿಂದು ಇವರೆಲ್ಲ ಮತ್ತೆ ಬಸ್ ಹತ್ತಿ ಕುಳಿತು, ತಮ್ಮ ತಮ್ಮ ಅಮ್ಮನನ್ನೋ ಅಪ್ಪನನ್ನೋ ಒರಗಿಕೊಂಡು ತೂಕಡಿಸುತ್ತಾ ಮನೆಗೆ ಬಂದು ಸೇರಿದ್ದಾಯ್ತು. ಆಮೇಲೆ ನಿಶು ಮನೇಲಿ ಮೂರ್ನಾಲ್ಕು ದಿನ ಕುಂಬಳಕಾಯಿ ಪಲ್ಯ, ಕುಂಬಳಕಾಯಿ ಮಜ್ಜಿಗೆಹುಳಿ, ಕುಂಬಳಕಾಯಿ ಪೈ....ಅಯ್ಯೋ ಹೋಗ್ಲಿ ಸಾಕು ಬಿಡಿ....ಈಗ ಫೋಟೋ ನೋಡ್ಬಿಡಿ.





ಕೋಳಿಮರಿ, ಕೋಳಿಮರಿ...ಕಾಳು ಬೇಕೇ?





ಕಾಳು ಬೇಕು, ಕೂಳು ಬೇಕು...ಎಲ್ಲ ಬೇಕು







ಕುರೀಮರೀಗೂನು ಈಗ ಹಸಿವು ಆಗಿದೆ




ಮೇಕೆಮರಿಯೂ ಬಾಯಿ ಹಾಕಿ ಹುಲ್ಲು ತಿಂತಿದೆ


************




ಹಲೋ...ನನ್ಹೆಸ್ರು ಕುಂಬಳ ಅಂತ. ಬನ್ನಿ ಬನ್ನಿ .............



ಟ್ರಾಕ್ಟರ್ ಸವಾರೀಗೆ ರೆಡೀನಾ?





ಟ್ರಾಕ್ಟರ್ ಸವಾರಿ ಏನ್ ಗಮ್ಮತ್ತಪ್ಪಾ....ಮಜಾ ಅಂದ್ರೆ ಮಜಾ.........



ಅಮ್ಮಾ ಅಮ್ಮಾ....ಅದೇನು?





ಇದಕ್ಕೆ ಕಾಲಿಫ್ಲವರ್ ಅಂತ ಯಾಕಂತಾರೆ?





ಪಂಪ್‍ಕಿನ್ ಪ್ಯಾಚ್ ಬಂತು!................




ಹೀಗೆ ಬಗ್ಗಿ, ಎರಡೂ ಕೈಯಲ್ಲಿ ಹಿಡಿದು....




ಕುಂಬಳಕಾಯಿ ಎತ್ಕೋಬೇಕು.




ಆಮೇಲೆ, ಹೀಗೆ ನಿಧಾನಕ್ಕೆ ಎತ್ಕೊಂಡು ಹೋಗಿ....






ಅಮ್ಮಂಗೆ ಕೊಡ್ಬೇಕು.


ಬಾಯ್ ಬಾಯ್ ಪಂಪ್ಕಿನ್ ಪ್ಯಾಚ್.....


ಅಮ್ಮಾ, ಕುಂಬಳಕಾಯಿ ಇಲ್ಲೇ ಇಟ್ಟು ಮಾರೋಣ್ವಾ?





ನೋಡು ಎಷ್ಟು ಜನ ಗಿರಾಕಿಗಳಿದಾರೆ ಇಲ್ಲಿ!











Wednesday, December 31, 2008

Happy New Year



ಮುನಿಸಿಕೊಂಡು ಕುಳಿತಿರೋ ನನ್ನ ಕಂಪ್ಯೂಟರ್ ಸಿಟ್ಟು ಇನ್ನೂ ಇಳಿದಿಲ್ಲ. ಕಂಪ್ಯೂಟರ್ ಇಲ್ಲದೆ ಒಂದು ಕೈ ಕಳೆದುಕೊಂಡ ಹಾಗೂ, ಕನ್ನಡ ಲೋಕಕ್ಕೆ ನಾನು ತೆರಿದಿಟ್ಟಿರುವ ಕಿಟಕಿ, ಬಾಗಿಲುಗಳೆಲ್ಲ ಮುಚ್ಚಿಕೊಂಡಿರೋ ಹಾಗೂ ಅನ್ನಿಸುತ್ತಿರುವಾಗ ತನ್ನ ಪಾಡಿಗೆ ತಾನು ಹೊಸ ವರ್ಷ ಬಂದಿದೆ. ನನ್ನದಲ್ಲದ ಕಂಪ್ಯೂಟರ್‌ನಿಂದ ಈ ಪೋಸ್ಟ್ ಮಾಡ್ತಾ ಇದೀನಿ.

ನಿಮ್ಮೆಲ್ರಿಗೂ ಹೊಸ ವರ್ಷದ ಶುಭಾಶಯಗಳು. ನನ್ನ ನಿಶೂ ಹಾಗೇ ನೀವೂ ಎಲ್ಲ ಸದಾ ಕಾಲ ನಗ್ತಾ, ನಲೀತಾ ಸಂತೋಷವಾಗಿರಿ.


HAPPY NEW YEAR




Sunday, October 26, 2008

ಒಂದು ವಚನ ಕೇಳ್ತೀರಾ...?

ನಿಶು ಅಮ್ಮನಿಗೆ ನಿಂತಲ್ಲಿ ಕೂತಲ್ಲಿ ಹಾಡು ಗುನುಗುತ್ತಾ ಇರೋ ಅಭ್ಯಾಸ. ಹಾಗೆ ಅಮ್ಮ ಗುನುಗೋ ಭಾವಗೀತೆ, ಚಿತ್ರಗೀತೆ, ವಚನ, ದೇವರನಾಮ ಎಲ್ಲವನ್ನೂ ಸಲೀಸಾಗಿ ಕದ್ದು ಇದ್ದಕ್ಕಿದ್ದಂತೆ ಒಂದು ದಿನ ಪೂರಾ ಹಾಡು ಹೇಳಿ ಅಮ್ಮ, ಅಪ್ಪ ಇಬ್ಬರಿಗೂ ಸರ್ಪ್ರೈಸ್ ಕೊಡೋದು ನಿಶು ಹವ್ಯಾಸ. ಹಾಡಿನ ಜೊತೆಗೆ, ಎಲ್ಲ ಹಾಡನ್ನೂ ಡ್ಯಾನ್ಸ್ ಮಾಡುತ್ತಾ ಹೇಳೋದು ಅದು ಹ್ಯಾಗೋ ನಿಶೂಗೆ ತುಂಬಾ ತುಂಬಾ ಇಷ್ಟ. ಹೀಗಾಗಿ ಕಲಿತ ಹಾಡಿಗೆಲ್ಲ ಅರ್ಥ ಕೇಳಿ ತಾನೇ ಕೋರಿಯೋಗ್ರಫಿ ಮಾಡಿಕೊಳ್ಳೋದುಂಟು. ಇವನ ಈ ಹಾಡು, ಅಭಿನಯ, ಅರ್ಥವಂತಿಕೆಯೆಲ್ಲಾ ನಿಮ್ಮ ಜೊತೆ ಹಂಚಿಕೊಳ್ಳೋ ಖುಷಿ ನನ್ನದು!

ಬಸವಣ್ಣನವರ ಈ ವಚನ ನನಗೂ ನಿಶೂಗೂ ತುಂಬಾ ಇಷ್ಟ. ಅಭಿನಯಿಸುತ್ತಾ ಹೇಳುವಾಗ, ಅರ್ಥ ವಿವರಿಸುವಾಗ ಅದು ಹ್ಯಾಗೋ ಮಧ್ಯ ನುಸುಳುತ್ತಿದ್ದ ಸಿಲ್ಲಿ ಗಿಗಲ್‍ಗಳಿಗೆಲ್ಲ ಕತ್ತರಿ ಹಾಕಿದ್ದಾಗಿದೆ. `ಕಲಬೇಡ ಕೊಲಬೇಡ' ಅಂತ ಹಾಡುತ್ತಾ ಮಧ್ಯೆ ಮಧ್ಯೆ ನಿಶು ಮೂಗಿಗೆ ಬೆರಳಿಡಲು ಶುರು ಮಾಡುತ್ತಿದ್ದಂತೆ `ಮೂಗೊಳಗೆ ಬೆರಳಿಡಬೇಡ' ಅಂತ ಅಮ್ಮ ಹಾಡಿದ್ದೂ ಎಡಿಟ್ ಆಗಿದೆ. ಈಗ ನೀವೂ ಈ ವಚನ ಕೇಳಿ, ನೋಡಿ......

ದೀಪಾವಳಿ ಶುಭಾಶಯಗಳು ನಿಮ್ಮೆಲ್ರಿಗೂ....

Monday, October 06, 2008

ನಿಶು ಮನೆಗೆ ಬಂದವರ್ಯಾರು?

ನನ್ನ ಪ್ರೀತಿಯ ಕವಿ, ಕಥೆಗಾರ ಜಯಂತ್ ಕಾಯ್ಕಿಣಿ ಈ ಬಾರಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಅಂತ ಶಿಕಾಗೋಗೆ ಬಂದು, ಹಾಗೇ ಇಲ್ಲಿ ನ್ಯೂಜೆರ್ಸಿಗೂ ಬಂದವರು ನಿಶುಮನೆಗೂ ಬಂದೇ ಬಿಟ್ಟರು! ನಿಶೂಗೆ ಜಯಂತ್ ಅಂಕಲ್‍ನ ಪರಿಚಯ ಮಾಡಿಕೊಡ್ತಾ, `ನೋಡು ಚಿನ್ನಾ, ಈ ಅಂಕಲ್ಲೇ ನಿನ್ನ ಗಾಳಿಪಟ ಹಾಡು ಬರ್ದಿರೋದು' ಅಂದ್ರೆ, ತನ್ನ ಯಾವತ್ತಿನ style ನಲ್ಲೇ ನಿಶು ಕೇಳಿದ್ದು `why' ಅಂತ!

ಇವನ ಪ್ರಶ್ನೆಗೆ ನಾನು ಉತ್ತರಿಸೋ ಮೊದಲೇ ಅಂಕಲ್ ಇವನನ್ನ ಎತ್ತಿ, ಮುದ್ದಾಡಿ, ಚೆಂಡಾಡಿ, ಕೊಂಡಾಡಲು ಶುರುವಿಟ್ಟಾಗಿತ್ತು.
ಇವರಿಬ್ಬರ ಈ ಅಮೃತ ಘಳಿಗೆಯನ್ನ ಕಣ್ಣ ತುಂಬಾ ನೋಡೋದೋ, ಕ್ಯಾಮರಾದಲ್ಲಿ ಸೆರೆ ಹಿಡಿದುಬಿಡೋದೋ ಗೊತ್ತಾಗದೆ, ಅಂತೂ ಕ್ಯಾಮೆರಾ ಕೈಗೆತ್ತಿಕೊಂಡರೆ, ಮೆಮೋರಿ ಫುಲ್ಲಾಗಿ ........`live view' ಇಲ್ಲದೆ....... ಅಂತೂ ಕಷ್ಟ ಪಟ್ಟು ತೆಗೆದ ಒಂದಷ್ಟು ಚಿತ್ರಗಳಲ್ಲಿ, ಕೆಲವು ಇಲ್ಲಿವೆ. ಹಿಂದೆ ಬ್ಯಾಕ್‍‍ಲೈಟ್ ಬೇರೆ ಇದ್ದು, ಏನೂ ಕಾಣೀಸದೇ ಇದ್ದ ಚಿತ್ರಗಳಲ್ಲೂ ಅಷ್ಟಿಷ್ಟು ಕೈಯ್ಯಾಡಿಸಿ ಹಾಕಿದ್ದೇನೆ.
ನಿಶೂನ ಅತ್ತೆ ತೆಗೆದ ಒಂದು ಚಿತ್ರ, ಜೊತೆಗೆ ಜಯಂತ್ camera ದಲ್ಲಿ ಪ್ರಸನ್ನ ಅವರು ತೆಗೆದ ಒಂದು ಚಿತ್ರ ಕೂಡ ಇಲ್ಲಿದೆ.




........ಹತ್ರ ಹೋಗಿ, ಗುಟ್ಟು ಹೇಳಿ...........




.........ಸಿಕ್ಕೇಬಿಟ್ಟ ಅನ್ನುವಾಗ..ನಾನೇನ್ಮಾಡ್ತೀನ್ ಗೊತ್ತಾ?.......




.......ಹಾಗೇ ಹಿಂದಕ್ಕೆ ಬಗ್ಗಿ.................




........ಪಲ್ಟಿ ಹಾಕಿಬಿಡ್ತೀನಿ........

..... ನಾನೇ ಗೆದ್ದಿದ್ದೂ!!!




ಜಯಂತ್ ಅಂಕಲ್ ಅಮ್ಮಂಗೂ ಫ್ರೆಂಡ್‍ ಅಂತೆ...





ಅತ್ತೆ, ಮಾವಾನೂ ಅವರ ಜೊತೆ ಫೋಟೋ ತೆಗೆಸಿಕೊಂಡ್ರು....


ಆದ್ರೆ ಅವ್ರು ನನ್ ಜೊತೇನೇ ಜಾಸ್ತಿ ಫೋಟೋ ತೆಗೆಸಿಕೊಂಡಿದ್ದು
ಎಲ್ಲಾರ್ಗಿಂತ ಅವ್ರು ನಂಗೇ ಜಾಸ್ತಿ ಫ್ರೆಂಡು


ಜಯಂತ್ ಅಂಕಲ್‍ನೇ ಕೇಳಿ ನೋಡಿ ಬೇಕಿದ್ರೆ!

*******

Special thanks to :

ನಿಶು ಬ್ಲಾಗಲ್ಲಿ ಈ ಚಿತ್ರಗಳನ್ನ ಹಾಕಬಹುದಾ ಅಂತ ಕೇಳಿದ್ದಕ್ಕೆ, ಒಂಚೂರೂ ತಡಮಾಡದೆ `ಓಕೆ' ಹೇಳಿದ ಜಯಂತ್ ಮತ್ತು ಸ್ಮಿತಾಗೆ.

Monday, September 29, 2008

ನಿಶೂ ಬರೆದ ಗಣೇಶನ ಚಿತ್ರ

ಮೊನ್ನೆ ಗಣಪತಿ ಹಬ್ಬದಲ್ಲಿ ಅಮ್ಮ (ಯಾವತ್ತೋ) ಮಾಡಿದ್ದ ಗಣಪತಿ ಪೆಯಿಂಟಿಂಗ್ ನೋಡಿದಾಗಿನಿಂದ ನಿಶೂಗೆ ಗಣಪತಿ ಚಿತ್ರ ಬರೆಯೋ ಹುಕ್ಕಿ ಬಂದುಬಿಟ್ಟಿದೆ. ತನ್ನ ಮ್ಯಾಗ್ನೆಟಿಕ್ ಸ್ಲೇಟಿನಲ್ಲಿ ನಿಶೂ ಬರೆದ ಗಣಪನ ಚಿತ್ರ ಇಲ್ಲಿದೆ.

ಗಣಪತಿ ಬರೆಯೋದು ತುಂಬಾ ಸುಲಭ ಅಮ್ಮಾ.....


ನೋಡು ನಾನೂ ಬರೆದ್ಬಿಟ್ಟೆ!....


ಹೀಗೇ ತಾನೆ?



ಆದ್ರೆ ಈ ಇಲಿ ಬರೆಯೋದು ಹ್ಯಾಗೆ ಗೊತ್ತಾಗ್ಲಿಲ್ಲ.......

Tuesday, August 12, 2008

ಆನೆ ಬಂತೊಂದಾನೆ


ಇದು ನಿಶುಮರಿ ತಿನ್ನೋ ಆನೆಮರಿ. ಪ್ಯಾನ್‍ಕೇಕ್ ದೇಹ, ಕ್ಯಾರೆಟ್ ಕಾಲು-ಬಾಲ, ಸಕ್ರೆ ಕಣ್ಣು....ಈ ಆನೆಮರೀಗೆ.
******

ನಿಶು ಒಂದು ವರ್ಷದ ಮಗುವಿದ್ದಾಗ, ಅವನನ್ನು ಸಾಲಿತ್‍ವಿಕ್ ಜ಼ೂಗೆ ಕರ್ಕೊಂಡು ಹೋಗಿದ್ವಿ. ಪ್ರಾಣಿ, ಪಕ್ಷಿಗಳನ್ನ ತುಂಬಾ ತುಂಬಾ ಇಷ್ಟ ಪಡುವ ನಿಶೂ ಅಲ್ಲಿ ಆನೆ ನೋಡಿದ್ದು ಹೀಗೆ........




......ಅಲ್ಲಿಂದ ಮನೆಗೆ ಬಂದ ಮೇಲೆ, `ಆನೆ ಮರಿ ಹ್ಯಾಗಿರತ್ತೆ' ಅಂತ ಕೇಳ್ದಾಗೆಲ್ಲ `ಹೀಗೆ ' ಅಂತ ತೋರಿಸ್ತಿದ್ದ.....



..................ಹೀಗೂ..................

...ಮತ್ತು.....ಹೀಗೂ ಇರತ್ತಂತೆ.


...............ಅಷ್ಟೇ ಅಲ್ಲ, ತನ್ನ ಗೊಂಬೆಗಳನ್ನೆಲ್ಲ ಸಾಲಾಗಿ ಕೌಚ್ ಮೇಲೆ ಕೂರಿಸಿ, ಅವಕ್ಕೆಲ್ಲ ಆನೆಸವಾರಿ ಮಾಡಿಸ್ತಿದ್ದ!


ಆಶ್ಲ್ಯಾಂಡ್ ಲಕ್ಷ್ಮೀ ದೇವಸ್ಥಾನದಲ್ಲೂ ಮೊದಲು ಕಣ್ಣಿಗೆ ಬೀಳ್ತಿದ್ದಿದ್ದು, ಕಂಭದ ಮೇಲೆ, ಗೋಡೆ ಮೇಲೆ ಇದ್ದ ಆನೆಗಳೇ.





ಮೊನ್ನೆ ಮೂರು ತುಂಬಿದಾಗ, ನಿಶು ನ್ಯೂ ಜೆರ್ಸಿಯ ಸಿಕ್ಸ್‌ಫ್ಲಾಗ್ಸ್‌ನಲ್ಲಿರೋ ಅನಿಮಲ್ ಸಫಾರಿಯಲ್ಲಿ ಕಂಡ ಆನೆಗಳು..............


....................ಹೀಗಿದ್ವು.

ಇಲ್ಲೇ ಮನೆ ಹತ್ತಿರ ನಡೀತಿದ್ದ ಕಾರ್ನಿವಲ್ ಒಂದರಲ್ಲಿ, ಅಪ್ಪನ ಜೊತೆ `ಹಾರೋ ಆನೆ' ಗಿರಗಿಟ್ಲೆ ಮೇಲೆ ಕೂತು ನಿಶು ಎಂಜಾಯ್ ಮಾಡಿದ್ದು ಹೀಗೆ...



...............ಮತ್ತು ಹೀಗೆ!
ನಂಗೆ ಗೊತ್ತಿರೋ ಒಂದಿಷ್ಟು ಆನೆ ಹಾಡುಗಳು ಇಲ್ಲಿವೆ.


ಆನೆ ಹಾಡು - ೧

ಆನೆ ಬಂತೊಂದಾನೆ
ಏರಿ ಹತ್‍ತೊಂದಾನೆ
ದಾರೀಲ್ ನಡೀತೊಂದಾನೆ
ಎಳೆಹುಲ್ ಮೇಯ್ತೊಂದಾನೆ
ತಿಳಿನೀರ್ ಕುಡೀತೊಂದಾನೆ
ಹಿಂಡಲ್ಲಿ ಉಳೀತೊಂದಾನೆ
ಕಂಡಲ್ಲಿ ನಡೀತೊಂದಾನೆ
ಆನೆಗಳೆಲ್ಲ ಸಾಲಿಡುವಾಗ....
ಇದೆಲ್ಲಿ ಬಂತು ಮರಿಯಾನೆ?
ಇದೆಲ್ಲಿ ಬಂತು ಪುಟ್ಟಾನೆ?

(ಕಡೆಯ ಎರಡು ಸಾಲು ಹೇಳುವಾಗ ನಿಮ್ಮ ಮುಂದೆ ಇರೋ ಪುಟ್ಟಾನೆ ಮರಿಯನ್ನು ಹಿಡಿದು ಕಚಗುಳಿ ಕೊಟ್ಟರೆ, ತುಂಬಾ ಚೆನ್ನಾಗಿರತ್ತೆ).


ಆನೆ ಹಾಡು - ೨


ಆನೆ ಬಂತೊಂದಾನೆ

ಯಾವೂರಾನೆ?

ಬಿಜಾಪುರದಾನೆ

ಇಲ್ಲೀಗ್ಯಾಕೆ ಬಂತು?

ದಾರಿ ತಪ್ಪಿ ಬಂತು

ದಾರೀಲೊಂದು ಕಾಸು,

ಬೀದೀಲೊಂದು ಕಾಸು

ಎಲ್ಲಾ ದುಡ್ಡೂ ತಗೊಂಡು

ಶೆಟ್ರಂಗ್‍ಡೀಗ್ ಹೋಗಿ,

ಕೊಬ್ರಿ ಮಿಟಾಯ್ ಕೊಂಡ್‍ಕೊಂಡು,

ಮಕ್ಕಳ್‍ಗೆಲ್ಲ ಕೊಟ್ಟು,

ತಾನೊಂಚೂರ್ ತಿಂದು,

ಆನೆ ಓಡಿ ಹೊರ್ಟ್‌‍ಹೋಯ್ತು!


(ಈ ಹಾಡು ಹೇಳುವಾಗ, ನೀವೇ ಆನೆ ಆಗಿ ನಿಮ್ಮ ಪುಟಾಣಿಗೆ ಆನೆಸವಾರಿ ಮಾಡಿಸಬೇಕು)