Thursday, July 05, 2007

ಮಳೆ ಹಾಡುಗಳು

ಮಳೆ ಬಂತು ಮಳೆ, ಕೊಡೆ ಹಿಡಿದು ನಡೆ
ಜಾರಿ ಬಿದ್ದು ಆಯಿತು ಬಟ್ಟೆಯೆಲ್ಲ ಕೊಳೆ!

'ಮಳೆ ಬಂತು ಮಳೆ' ಹಾಡನ್ನ ನಾನು ಕಲಿತಿದ್ದು ಶಿಶುವಿಹಾರದಲ್ಲಿದ್ದಾಗ. ಈಗ ಹೀಗೆ ಮನೆಯಿಂದ, ಆಚೆ ಸುರಿಯೋ ಮಳೆ ನೋಡ್ತಾ ನಿಶು ಜೊತೆಗೆ ಈ ಹಾಡು ಹೇಳೋವಾಗ ಆಗ ಹಾಡಿದ್ದಾಗ ಆದಷ್ಟೇ ಖುಷಿ ಆಗ್ತಿದೆ.


7ನೇ ಕ್ಲಾಸ್ ತನಕ ಕನ್ನಡ ಮೀಡಿಯಂನಲ್ಲೇ ಓದುವ ಪುಣ್ಯ ನನಗಿತ್ತು. ಹೀಗಾಗಿ Englishಶುರುವಾಗಿದ್ದು 5ನೇ ಕ್ಲಾಸ್ನಿಂದ. A B C D, Apple, Banana.. ಜೊತೆಗೇ ಸ್ವಂತ ಆಸಕ್ತಿಯಿಂದ, ಮಕ್ಕಳಿಗೆ ಖುಷಿಯಾಗಲಿ ಅಂತ ದಾಸಪ್ಪ ಮೇಷ್ಟ್ರು ನಮಗೆಲ್ಲ ಒಂದಷ್ಟು rhymes ಹೇಳಿಕೊಟ್ಟಿದ್ರು. ಹಾಡನ್ನು ಅವರು ಅಭಿನಯಿಸಿ, ಚಿತ್ರ ತೋರಿಸಿ ಪ್ರೀತಿಯಿಂದ ಕಲಿಸುತ್ತಿದ್ದ ಬಗೆ ನನಗೆ ನೆನ್ನೆ ಕಂಡಷ್ಟೇ ಚೆನ್ನಾಗಿ ನೆನಪಿದೆ. ಅವರು ಕಲಿಸಿದ್ದ Rain, rain go away ಹಾಡಿನಿಂದಲೇ, ನನಗೆ English ಮೇಲೆ ಪ್ರೀತಿ ಹುಟ್ಟಿದ್ದು ಅಂತ ಕಾಣತ್ತೆ.

Rain, rain go away

Come again another day

Little johnny wants to play

Rain, rain go away.

ಕನ್ನಡದಲ್ಲಿ ಹೀಗೆ ಭಾವಾನುವಾದ ಮಾಡಿದ್ರೆ...

'ಬಾರೊ ಬಾರೊ ಮಳೆರಾಯ,

ಬಾರೊ ನಮ್ಮನೆ ತೋಟಕ್ಕೆ

ಈವತ್ತ್ ಬೇಡ ನಾಳೇಗ್ಬಾರೋ

ಈಗ್ ನಾನ್ ಹೋಗ್ಬೇಕ್ ಆಟಕ್ಕೆ.'

ಈಗ ಇಲ್ಲಿ ನಿಶು, ಕನ್ನಡ ಇಂಗ್ಲಿಷ್ ಎಲ್ಲ ಬೆರೆಸುತ್ತ, ಎರಡರಲ್ಲೂ ಒಟ್ಟೊಟ್ಟಿಗೆ ಮಾತನಾಡುತ್ತಾ ನಲಿಯುತ್ತಿದ್ದರೆ, ಈ ಮಗುವಿಗೆ ಇಂಗ್ಲಿಷ್ ಮಳೆಯ ಸೊಬಗು, ಕನ್ನಡ ಮಣ್ಣಿನ ಕಂಪು ಎರಡನ್ನೂ ಅನುಭವಿಸಲು ಸಾಧ್ಯವಾದೀತ, ಇನ್ನೂ ಯಾವ್ಯಾವ ಭಾಷೆಗಳ ಮಳೆಯಲ್ಲಿ ನೆನೆಯೋ ಸುಖ ಇವನಿಗೆ ಸಿಗಬಹುದು ಅಂತ ಅಂದುಕೊಳ್ಳುತ್ತಿದ್ದೇನೆ, ಹಾಗೇ ಸುಮ್ಮನೆ.



ಚಿತ್ರಗಳು: ಮೀರ