Thursday, September 13, 2007

ತಾಚಿ ಮಾಡ್ತಿರೋ ನಿಶುಮನೆಯಲ್ಲಿ ಒಂದು ಲಾಲಿಹಾಡು


Indiaದಿಂದ ನಮ್ಮತ್ತೆ ಬಂದಿದ್ದಾರೆ. ಸಿಕ್ಕಾಪಟ್ಟೆ ಕೆಲ್ಸ. cooking-cleaning ಚಕ್ರದಲ್ಲಿ ಸುತ್ತುಹೊಡೀತಿರೋ ನಂಗೆ ಬೇರೆ ಯಾವ ಕೆಲ್ಸಕ್ಕೂ ಸಮಯಾನೇ ಸಿಗ್ತಿಲ್ಲ. ಹೀಗಾಗಿ ನಿಶುಮನೆ ಸ್ವಲ್ಪ ದಿನದಿಂದ ನಿದ್ದೆ ಮಾಡ್ತಿದೆ. 'ಯಾಕೆ update ಮಾಡ್ತಿಲ್ಲ' ಅಂತ ನೀವೆಲ್ಲ ಹೀಗೇ ಆಗಾಗ ಒಂಚೂರು ಚುಚ್ಚಿ ಎಚ್ಚರಿಸ್ತಾ ಇರಿ.....

ಈ ಮಲಗಿರೋ ಡೈನೋಸಾರನ್ನ ಎಬ್ಬಿಸೋದು ಹ್ಯಾಗೆ?


ಕುಲಾವಿ ಹೆಣೆಯೋಕೆ ಬರದ ಈ ಅಮ್ಮ, ನಿಶು ಹುಟ್ಟೋಕೆ ಮುಂಚೆ ಅವನಿಗೆ ಅಂತ ಹೆಣೆದಿದ್ದು ಈ ಲಾಲಿಹಾಡು. thatskannadaದಲ್ಲಿ ಪ್ರಕಟವಾಗಿದ್ದ ಈ ಹಾಡು ಇಲ್ಲಿ ಮತ್ತೆ ಕೊಡ್ತಿದ್ದೀನಿ, ನಿಶುವಿನ ಕೆಲವು ಹಳೆಯ ಚಿತ್ರಗಳ ಜೊತೆಗೆ. ನಿಮಗೆ ಇಷ್ಟವಾಯ್ತಾ ಇಲ್ವಾ ತಿಳಿಸ್ತೀರಾ?


ಲಾಲಿಹಾಡು
_______

ಮುತ್ತಿನಾರತಿ ತಂದು ಎತ್ತಿ ಬೆಳಗೀರೇ.....
ಮುದ್ದು ಮಾತಾಡೊ ನನ್ನರಗಿಳಿಗೆ ಕಂದಂಗೆ
ಮುತ್ತಿನಂಥಾ ನನ್ನ ಮಗುವೀಗೆ.........
ಜೋ..ಜೊ........ಜೋ...ಜೊ..............


ಮಣ್ಣೀನ ಗಂಧಾಕೆ ಸೋಲುವಾ ಮನಸಿರಲಿ
ಹಕ್ಕಿಯಂತೆ ಹಾರೊ ಕನಸಿರಲಿ ಕಣ್ತುಂಬ
ನಕ್ಷತ್ರದಾ ಬೆಳಕು ತುಂಬಿರಲೀ..........
ಜೋ...ಜೊ........ಜೋ....ಜೊ..........


ಉರಿಯುವಾ ನೇಸರ ತಣ್ಣಾನೆ ಚಂದಿರ
ಹಾಡು ಹಕ್ಕಿಯು ಹಸಿರು ಇರುವಂಥ ಈ ನೆಲವು
ನಿನ್ನ ನಗುವಿಂದಲೆ ಚೆಲುವಾಯಿತು............
ಜೋ...ಜೊ........ಜೋ.....ಜೊ...........


ಮುತ್ತಿನಾ ಮಣಿ ನೀನು ಮುದ್ದಿನಾ ಗಿಣಿ ನೀನು
ಹೊನ್ನಿನಾ ಗಣಿ ನೀನು ನನ್ನೆದೆಗೆ ಕಂದಯ್ಯ
ಬಣ್ಣಾದ ರಂಗೋಲಿ ಅಂಗಳಕೇ............
ಜೋ...ಜೊ..........ಜೋ...ಜೊ.............