Sunday, November 11, 2007

ಕಥೆ : ರಾಜನ ಕಷ್ಟ

ಮಕ್ಕಳ ಕಥೆಗಳು ಹೇಗಿರಬೇಕು? ನೀತಿ ಬೋಧಿಸಲೆಂದೇ ಅದಕ್ಕೊಂದು ಕಥೆ ಹೆಣೆದು, ನೀತಿಯ ಭಾರದಿಂದ ಜಗ್ಗುವ ಕಥೆಗಳು ತೀರಾ ಪುಟ್ಟ ಮಕ್ಕಳಿಗೆ ಬೇಕ? ಅಥವ ಸುಮ್ಮನೆ ಅವರ ಕುಥೂಹಲ ಕೆರಳಿಸುವ, ಕಣ್ಣು ಅರಳಿಸುವ, ಕಲ್ಪನೆ ಗರಿಗೆದರಿಸುವ, ನಿರ್ದಿಷ್ಟ ನಿಯಮ, ಬಂಧ ಯಾವುವೂ ಇರದ ಕಥೆಗಳು ಬೇಕ? ನನಗೇನೋ ಈ ಎರಡನೆ ಮಾದರಿಯವೇ ಇಷ್ಟ. ಅದರಲ್ಲೂ ನಾನು ಹೇಳುವ ಕಥೆಗಳಲ್ಲಿ, ನಿಶುವನ್ನೇ ಒಂದು ಪಾತ್ರವಾಗಿಸಿ, ಅವನು ಆಡುವಂಥದ್ದೇ ಮಾತುಗಳನ್ನ ಹಾಕಿ, ಕಥೆ ಕೇಳುವಾಗ ಚೂರೇ ಬಿಡುವ ಅವನ ಬಾಯಿ, ಅರಳುವ ಅವನ ಕಣ್ಣು, ಮುಖ ನೋಡುತ್ತ, ಕಥೆಯನ್ನ ಇನ್ನೂ ಇನ್ನೂ 'ಸಿಲ್ಲಿ'ಯಾಗಿಸುತ್ತಾ, ಅವನನ್ನ ನಗಿಸುತ್ತಾ ಹೋಗೋದು ಅಂದರೆ ನನಗೆ ತುಂಬಾ ಇಷ್ಟ. ಅಂತ ಒಂದು ಕಥೆ ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ....




ರಾಜನ ಕಷ್ಟ




ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೆ ಮೂರು ಜನ ಮಕ್ಕಳು. ಮೊದಲನೆ ಮಗು ಹೆಸ್ರು 'ನಿ' ಅಂತ. ಎರಡನೆ ಮಗು 'ಶಾಂ', ಮೂರನೇ ಮಗು, 'ತ್'. ಮೂರೂ ಮಕ್ಕಳನ್ನೂ ಒಟ್ಟಿಗೇ ಕರೆಯುವಾಗ ಆ ರಾಜ ಅವರ ಹೆಸರನ್ನೆಲ್ಲ ಒಟ್ಟಿಗೆ ಸೇರಿಸಿ 'ನಿಶಾಂತ್.....' ಅಂತ ಕೂಗ್ತಿದ್ದ. ಹಾಗೆ ಅವನು ಕೂಗಿದಾಗೆಲ್ಲ 'ನಿ', 'ಶಾಂ', 'ತ್' ಮೂರೂ ಮಕ್ಕಳೂ ಓಡಿ ಓಡಿ ಬರ್ತಿದ್ರು. ಜೊತೆಗೆ ಈ 'ನಿಶಾಂತ್' ಕೂಡ ಓಡಿ ಹೋಗಿ ರಾಜನ ಮುಂದೆ ನಿಂತುಬಿಡ್ತಿದ್ದ. ರಾಜ ಇವನನ್ನ ನೋಡಿ ಕೇಳ್ತಿದ್ದ,
'ನಾನು ಕರೆದಿದ್ದು ನನ್ನ ಮಕ್ಕಳನ್ನ. ನೀನ್ಯಾಕಪ್ಪ ಬಂದೆ?'
ಅದಕ್ಕೆ ನಿಶಾಂತ್ ಹೇಳ್ತಿದ್ದ,
'ಮತ್ತೆ ನೀವು ನಿಶಾಂತ್ ಅಂತ ಕೂಗಿ ಕರೆದ್ರಲ್ಲ, ಅದು ನನ್ನ ಹೆಸ್ರು. ನೀವು ಹಾಗೆ ಕರೆದಿದ್ದಕ್ಕೆ ಬಂದೆ'.
ಪ್ರತಿ ಸಲವೂ ಹೀಗೇ ಆಗ್ತಿತ್ತು. ರಾಜ ಅವನ ಮಕ್ಕಳನ್ನ ಒಟ್ಟಿಗೆ ಕೂಗಿ ಕರೆದಾಗೆಲ್ಲ, ಆ ಮೂರು ಮಕ್ಕಳ ಜೊತೆ ನಿಶಾಂತ್ ಕೂಡ ಹೋಗಿ ನಿಂತು ಬಿಡ್ತಾನೆ. ಕೇಳಿದ್ರೆ,
'ನೀವು ನನ್ನ ಹೆಸ್ರನ್ನೇ ತಾನೆ ಕೂಗಿದ್ದು' ಅಂತಾನೆ.
ರಾಜನಿಗೆ ದೊಡ್ಡ ಪಜೀತಿ. ಅವನಿಗೆ ಹೀಗಾದಾಗಲೆಲ್ಲ ಏನ್ ಮಾಡಬೇಕು ಅಂತ ಗೊತ್ತಾಗ್ದೆ ತಲೆ ಮೇಲೆ ಕೈ ಹೊತ್ತು ಕುಳಿತು ಬಿಡ್ತಾನೆ. ಆ ದೊಡ್ಡ ರಾಜನ ಪಜೀತಿ ನೋಡಿ ಈ ನಾಲ್ಕು ಮಕ್ಕಳಿಗೂ ಜೋರಾಗಿ ನಗು ಬಂದು ಬಿಡತ್ತೆ. ಜೋರಾಗಿ ನಗ್ತಾ, ಹೋ ಅಂತ ಕೂಗ್ತ ಈ ಮಕ್ಕಳೆಲ್ಲ ಆ ರಾಜನ ಅರಮನೆಯೊಳಗೆಲ್ಲ ಗಲಾಟೆ ಮಾಡ್ಕೊಂಡು ಆಟ ಆಡೋಕೆ ಶುರು ಮಾಡ್ತಾರೆ.
- - - - - - - - - - - - - - - - - - - - - - - - - - -
ಈ ಕಥೆ ಬರೆಯುವಾಗ ನನಗೆ ಕನ್ನಡದಲ್ಲಿ ೩ ಎಂಬುದನ್ನ ಅಕ್ಷರದಲ್ಲಿ ಬರೆಯೋದಕ್ಕಾಗ್ದೆ ಸಾಕಷ್ಟು ಒದ್ದಾಡಿದ್ದಾಯ್ತು. ಕಡೆಗೂ 'ಮೂರು' ಅಂತಲೇ ಟೈಪ್ ಮಾಡಬೇಕಾಯ್ತು. ಬರಹದಲ್ಲಿ ಸರಿಯಾಗಿ ಬರೆಯೋಕ್ಕಾದ್ರೂ ಅದನ್ನ ಬ್ಲಾಗ್-ಗೆ ಹಾಕುವಾಗ ಪ್ರತಿಬಾರಿಯೂ 'ಮೂರು' ಅಂತಲೇ ಬರ್ತಿದೆ. ಓದುವಾಗ ನೀವು ಸರಿಯಾಗಿ ಓದಿಕೊಂಡುಬಿಡಿ ಮತ್ತು ನಿಮಗೆ ಯಾರಿಗಾದರೂ ಇದನ್ನ ಹ್ಯಾಗೆ ಸರಿ ಮಾಡೋದು ಗೊತ್ತಿದ್ರೆ ದಯವಿಟ್ಟು ತಿಳಿಸಿಕೊಡಿ.
'ಮೂ' ಸರಿ ಹೋಯ್ತು!
ಈ ಪೋಸ್ಟ್ ಹಾಕಿದ ೨೪ ಘಂಟೆ ಒಳಗೇ ನನಗೆ 'ಮೂ' ಸಮಸ್ಯೆಗೆ ಪರಿಹಾರ ಸಿಕ್ಕಿಬಿಡ್ತು. ಕನ್ನಡ ಬ್ಲಾಗಿಗರು ಎಷ್ಟು active-ಆಗಿ ಇದ್ದಾರಲ್ಲ ಅನ್ನಿಸಿ ತುಂಬಾ ಖುಷಿ ಆಗ್ತಿದೆ. ಅದಕ್ಕೆ ದಿನೇ ದಿನೇ ಕನ್ನಡ ಅರಳಿಕೊಳ್ತಾ ಇದೆ, ವೆಬ್ ಲೋಕದಲ್ಲಿ. ಪರಿಹಾರ ಸೂಚಿಸಿದ ಶ್ರೀ, ಸುಶ್ರುತ ಇಬ್ಬರಿಗೂ ತುಂಬಾ ಥ್ಯಾಂಕ್ಸ್.
- - - - - - - - - - - - - - - - - - - - - - - - - - - - - - - - - -
ನಿಶೂಗೆ ತುಂಬಾ ಇಷ್ಟವಾದ ಕಥೆಯೊಂದು ಇಲ್ಲಿದೆ. ನೀವೂ ನೋಡಿ.