Wednesday, December 31, 2008

Happy New Yearಮುನಿಸಿಕೊಂಡು ಕುಳಿತಿರೋ ನನ್ನ ಕಂಪ್ಯೂಟರ್ ಸಿಟ್ಟು ಇನ್ನೂ ಇಳಿದಿಲ್ಲ. ಕಂಪ್ಯೂಟರ್ ಇಲ್ಲದೆ ಒಂದು ಕೈ ಕಳೆದುಕೊಂಡ ಹಾಗೂ, ಕನ್ನಡ ಲೋಕಕ್ಕೆ ನಾನು ತೆರಿದಿಟ್ಟಿರುವ ಕಿಟಕಿ, ಬಾಗಿಲುಗಳೆಲ್ಲ ಮುಚ್ಚಿಕೊಂಡಿರೋ ಹಾಗೂ ಅನ್ನಿಸುತ್ತಿರುವಾಗ ತನ್ನ ಪಾಡಿಗೆ ತಾನು ಹೊಸ ವರ್ಷ ಬಂದಿದೆ. ನನ್ನದಲ್ಲದ ಕಂಪ್ಯೂಟರ್‌ನಿಂದ ಈ ಪೋಸ್ಟ್ ಮಾಡ್ತಾ ಇದೀನಿ.

ನಿಮ್ಮೆಲ್ರಿಗೂ ಹೊಸ ವರ್ಷದ ಶುಭಾಶಯಗಳು. ನನ್ನ ನಿಶೂ ಹಾಗೇ ನೀವೂ ಎಲ್ಲ ಸದಾ ಕಾಲ ನಗ್ತಾ, ನಲೀತಾ ಸಂತೋಷವಾಗಿರಿ.


HAPPY NEW YEAR
Sunday, October 26, 2008

ಒಂದು ವಚನ ಕೇಳ್ತೀರಾ...?

ನಿಶು ಅಮ್ಮನಿಗೆ ನಿಂತಲ್ಲಿ ಕೂತಲ್ಲಿ ಹಾಡು ಗುನುಗುತ್ತಾ ಇರೋ ಅಭ್ಯಾಸ. ಹಾಗೆ ಅಮ್ಮ ಗುನುಗೋ ಭಾವಗೀತೆ, ಚಿತ್ರಗೀತೆ, ವಚನ, ದೇವರನಾಮ ಎಲ್ಲವನ್ನೂ ಸಲೀಸಾಗಿ ಕದ್ದು ಇದ್ದಕ್ಕಿದ್ದಂತೆ ಒಂದು ದಿನ ಪೂರಾ ಹಾಡು ಹೇಳಿ ಅಮ್ಮ, ಅಪ್ಪ ಇಬ್ಬರಿಗೂ ಸರ್ಪ್ರೈಸ್ ಕೊಡೋದು ನಿಶು ಹವ್ಯಾಸ. ಹಾಡಿನ ಜೊತೆಗೆ, ಎಲ್ಲ ಹಾಡನ್ನೂ ಡ್ಯಾನ್ಸ್ ಮಾಡುತ್ತಾ ಹೇಳೋದು ಅದು ಹ್ಯಾಗೋ ನಿಶೂಗೆ ತುಂಬಾ ತುಂಬಾ ಇಷ್ಟ. ಹೀಗಾಗಿ ಕಲಿತ ಹಾಡಿಗೆಲ್ಲ ಅರ್ಥ ಕೇಳಿ ತಾನೇ ಕೋರಿಯೋಗ್ರಫಿ ಮಾಡಿಕೊಳ್ಳೋದುಂಟು. ಇವನ ಈ ಹಾಡು, ಅಭಿನಯ, ಅರ್ಥವಂತಿಕೆಯೆಲ್ಲಾ ನಿಮ್ಮ ಜೊತೆ ಹಂಚಿಕೊಳ್ಳೋ ಖುಷಿ ನನ್ನದು!

ಬಸವಣ್ಣನವರ ಈ ವಚನ ನನಗೂ ನಿಶೂಗೂ ತುಂಬಾ ಇಷ್ಟ. ಅಭಿನಯಿಸುತ್ತಾ ಹೇಳುವಾಗ, ಅರ್ಥ ವಿವರಿಸುವಾಗ ಅದು ಹ್ಯಾಗೋ ಮಧ್ಯ ನುಸುಳುತ್ತಿದ್ದ ಸಿಲ್ಲಿ ಗಿಗಲ್‍ಗಳಿಗೆಲ್ಲ ಕತ್ತರಿ ಹಾಕಿದ್ದಾಗಿದೆ. `ಕಲಬೇಡ ಕೊಲಬೇಡ' ಅಂತ ಹಾಡುತ್ತಾ ಮಧ್ಯೆ ಮಧ್ಯೆ ನಿಶು ಮೂಗಿಗೆ ಬೆರಳಿಡಲು ಶುರು ಮಾಡುತ್ತಿದ್ದಂತೆ `ಮೂಗೊಳಗೆ ಬೆರಳಿಡಬೇಡ' ಅಂತ ಅಮ್ಮ ಹಾಡಿದ್ದೂ ಎಡಿಟ್ ಆಗಿದೆ. ಈಗ ನೀವೂ ಈ ವಚನ ಕೇಳಿ, ನೋಡಿ......

ದೀಪಾವಳಿ ಶುಭಾಶಯಗಳು ನಿಮ್ಮೆಲ್ರಿಗೂ....

Monday, October 06, 2008

ನಿಶು ಮನೆಗೆ ಬಂದವರ್ಯಾರು?

ನನ್ನ ಪ್ರೀತಿಯ ಕವಿ, ಕಥೆಗಾರ ಜಯಂತ್ ಕಾಯ್ಕಿಣಿ ಈ ಬಾರಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಅಂತ ಶಿಕಾಗೋಗೆ ಬಂದು, ಹಾಗೇ ಇಲ್ಲಿ ನ್ಯೂಜೆರ್ಸಿಗೂ ಬಂದವರು ನಿಶುಮನೆಗೂ ಬಂದೇ ಬಿಟ್ಟರು! ನಿಶೂಗೆ ಜಯಂತ್ ಅಂಕಲ್‍ನ ಪರಿಚಯ ಮಾಡಿಕೊಡ್ತಾ, `ನೋಡು ಚಿನ್ನಾ, ಈ ಅಂಕಲ್ಲೇ ನಿನ್ನ ಗಾಳಿಪಟ ಹಾಡು ಬರ್ದಿರೋದು' ಅಂದ್ರೆ, ತನ್ನ ಯಾವತ್ತಿನ style ನಲ್ಲೇ ನಿಶು ಕೇಳಿದ್ದು `why' ಅಂತ!

ಇವನ ಪ್ರಶ್ನೆಗೆ ನಾನು ಉತ್ತರಿಸೋ ಮೊದಲೇ ಅಂಕಲ್ ಇವನನ್ನ ಎತ್ತಿ, ಮುದ್ದಾಡಿ, ಚೆಂಡಾಡಿ, ಕೊಂಡಾಡಲು ಶುರುವಿಟ್ಟಾಗಿತ್ತು.
ಇವರಿಬ್ಬರ ಈ ಅಮೃತ ಘಳಿಗೆಯನ್ನ ಕಣ್ಣ ತುಂಬಾ ನೋಡೋದೋ, ಕ್ಯಾಮರಾದಲ್ಲಿ ಸೆರೆ ಹಿಡಿದುಬಿಡೋದೋ ಗೊತ್ತಾಗದೆ, ಅಂತೂ ಕ್ಯಾಮೆರಾ ಕೈಗೆತ್ತಿಕೊಂಡರೆ, ಮೆಮೋರಿ ಫುಲ್ಲಾಗಿ ........`live view' ಇಲ್ಲದೆ....... ಅಂತೂ ಕಷ್ಟ ಪಟ್ಟು ತೆಗೆದ ಒಂದಷ್ಟು ಚಿತ್ರಗಳಲ್ಲಿ, ಕೆಲವು ಇಲ್ಲಿವೆ. ಹಿಂದೆ ಬ್ಯಾಕ್‍‍ಲೈಟ್ ಬೇರೆ ಇದ್ದು, ಏನೂ ಕಾಣೀಸದೇ ಇದ್ದ ಚಿತ್ರಗಳಲ್ಲೂ ಅಷ್ಟಿಷ್ಟು ಕೈಯ್ಯಾಡಿಸಿ ಹಾಕಿದ್ದೇನೆ.
ನಿಶೂನ ಅತ್ತೆ ತೆಗೆದ ಒಂದು ಚಿತ್ರ, ಜೊತೆಗೆ ಜಯಂತ್ camera ದಲ್ಲಿ ಪ್ರಸನ್ನ ಅವರು ತೆಗೆದ ಒಂದು ಚಿತ್ರ ಕೂಡ ಇಲ್ಲಿದೆ.
........ಹತ್ರ ಹೋಗಿ, ಗುಟ್ಟು ಹೇಳಿ...........
.........ಸಿಕ್ಕೇಬಿಟ್ಟ ಅನ್ನುವಾಗ..ನಾನೇನ್ಮಾಡ್ತೀನ್ ಗೊತ್ತಾ?.......
.......ಹಾಗೇ ಹಿಂದಕ್ಕೆ ಬಗ್ಗಿ.................
........ಪಲ್ಟಿ ಹಾಕಿಬಿಡ್ತೀನಿ........

..... ನಾನೇ ಗೆದ್ದಿದ್ದೂ!!!
ಜಯಂತ್ ಅಂಕಲ್ ಅಮ್ಮಂಗೂ ಫ್ರೆಂಡ್‍ ಅಂತೆ...

ಅತ್ತೆ, ಮಾವಾನೂ ಅವರ ಜೊತೆ ಫೋಟೋ ತೆಗೆಸಿಕೊಂಡ್ರು....


ಆದ್ರೆ ಅವ್ರು ನನ್ ಜೊತೇನೇ ಜಾಸ್ತಿ ಫೋಟೋ ತೆಗೆಸಿಕೊಂಡಿದ್ದು
ಎಲ್ಲಾರ್ಗಿಂತ ಅವ್ರು ನಂಗೇ ಜಾಸ್ತಿ ಫ್ರೆಂಡು


ಜಯಂತ್ ಅಂಕಲ್‍ನೇ ಕೇಳಿ ನೋಡಿ ಬೇಕಿದ್ರೆ!

*******

Special thanks to :

ನಿಶು ಬ್ಲಾಗಲ್ಲಿ ಈ ಚಿತ್ರಗಳನ್ನ ಹಾಕಬಹುದಾ ಅಂತ ಕೇಳಿದ್ದಕ್ಕೆ, ಒಂಚೂರೂ ತಡಮಾಡದೆ `ಓಕೆ' ಹೇಳಿದ ಜಯಂತ್ ಮತ್ತು ಸ್ಮಿತಾಗೆ.

Monday, September 29, 2008

ನಿಶೂ ಬರೆದ ಗಣೇಶನ ಚಿತ್ರ

ಮೊನ್ನೆ ಗಣಪತಿ ಹಬ್ಬದಲ್ಲಿ ಅಮ್ಮ (ಯಾವತ್ತೋ) ಮಾಡಿದ್ದ ಗಣಪತಿ ಪೆಯಿಂಟಿಂಗ್ ನೋಡಿದಾಗಿನಿಂದ ನಿಶೂಗೆ ಗಣಪತಿ ಚಿತ್ರ ಬರೆಯೋ ಹುಕ್ಕಿ ಬಂದುಬಿಟ್ಟಿದೆ. ತನ್ನ ಮ್ಯಾಗ್ನೆಟಿಕ್ ಸ್ಲೇಟಿನಲ್ಲಿ ನಿಶೂ ಬರೆದ ಗಣಪನ ಚಿತ್ರ ಇಲ್ಲಿದೆ.

ಗಣಪತಿ ಬರೆಯೋದು ತುಂಬಾ ಸುಲಭ ಅಮ್ಮಾ.....


ನೋಡು ನಾನೂ ಬರೆದ್ಬಿಟ್ಟೆ!....


ಹೀಗೇ ತಾನೆ?ಆದ್ರೆ ಈ ಇಲಿ ಬರೆಯೋದು ಹ್ಯಾಗೆ ಗೊತ್ತಾಗ್ಲಿಲ್ಲ.......

Tuesday, August 12, 2008

ಆನೆ ಬಂತೊಂದಾನೆ


ಇದು ನಿಶುಮರಿ ತಿನ್ನೋ ಆನೆಮರಿ. ಪ್ಯಾನ್‍ಕೇಕ್ ದೇಹ, ಕ್ಯಾರೆಟ್ ಕಾಲು-ಬಾಲ, ಸಕ್ರೆ ಕಣ್ಣು....ಈ ಆನೆಮರೀಗೆ.
******

ನಿಶು ಒಂದು ವರ್ಷದ ಮಗುವಿದ್ದಾಗ, ಅವನನ್ನು ಸಾಲಿತ್‍ವಿಕ್ ಜ಼ೂಗೆ ಕರ್ಕೊಂಡು ಹೋಗಿದ್ವಿ. ಪ್ರಾಣಿ, ಪಕ್ಷಿಗಳನ್ನ ತುಂಬಾ ತುಂಬಾ ಇಷ್ಟ ಪಡುವ ನಿಶೂ ಅಲ್ಲಿ ಆನೆ ನೋಡಿದ್ದು ಹೀಗೆ........
......ಅಲ್ಲಿಂದ ಮನೆಗೆ ಬಂದ ಮೇಲೆ, `ಆನೆ ಮರಿ ಹ್ಯಾಗಿರತ್ತೆ' ಅಂತ ಕೇಳ್ದಾಗೆಲ್ಲ `ಹೀಗೆ ' ಅಂತ ತೋರಿಸ್ತಿದ್ದ.......................ಹೀಗೂ..................

...ಮತ್ತು.....ಹೀಗೂ ಇರತ್ತಂತೆ.


...............ಅಷ್ಟೇ ಅಲ್ಲ, ತನ್ನ ಗೊಂಬೆಗಳನ್ನೆಲ್ಲ ಸಾಲಾಗಿ ಕೌಚ್ ಮೇಲೆ ಕೂರಿಸಿ, ಅವಕ್ಕೆಲ್ಲ ಆನೆಸವಾರಿ ಮಾಡಿಸ್ತಿದ್ದ!


ಆಶ್ಲ್ಯಾಂಡ್ ಲಕ್ಷ್ಮೀ ದೇವಸ್ಥಾನದಲ್ಲೂ ಮೊದಲು ಕಣ್ಣಿಗೆ ಬೀಳ್ತಿದ್ದಿದ್ದು, ಕಂಭದ ಮೇಲೆ, ಗೋಡೆ ಮೇಲೆ ಇದ್ದ ಆನೆಗಳೇ.

ಮೊನ್ನೆ ಮೂರು ತುಂಬಿದಾಗ, ನಿಶು ನ್ಯೂ ಜೆರ್ಸಿಯ ಸಿಕ್ಸ್‌ಫ್ಲಾಗ್ಸ್‌ನಲ್ಲಿರೋ ಅನಿಮಲ್ ಸಫಾರಿಯಲ್ಲಿ ಕಂಡ ಆನೆಗಳು..............


....................ಹೀಗಿದ್ವು.

ಇಲ್ಲೇ ಮನೆ ಹತ್ತಿರ ನಡೀತಿದ್ದ ಕಾರ್ನಿವಲ್ ಒಂದರಲ್ಲಿ, ಅಪ್ಪನ ಜೊತೆ `ಹಾರೋ ಆನೆ' ಗಿರಗಿಟ್ಲೆ ಮೇಲೆ ಕೂತು ನಿಶು ಎಂಜಾಯ್ ಮಾಡಿದ್ದು ಹೀಗೆ..................ಮತ್ತು ಹೀಗೆ!
ನಂಗೆ ಗೊತ್ತಿರೋ ಒಂದಿಷ್ಟು ಆನೆ ಹಾಡುಗಳು ಇಲ್ಲಿವೆ.


ಆನೆ ಹಾಡು - ೧

ಆನೆ ಬಂತೊಂದಾನೆ
ಏರಿ ಹತ್‍ತೊಂದಾನೆ
ದಾರೀಲ್ ನಡೀತೊಂದಾನೆ
ಎಳೆಹುಲ್ ಮೇಯ್ತೊಂದಾನೆ
ತಿಳಿನೀರ್ ಕುಡೀತೊಂದಾನೆ
ಹಿಂಡಲ್ಲಿ ಉಳೀತೊಂದಾನೆ
ಕಂಡಲ್ಲಿ ನಡೀತೊಂದಾನೆ
ಆನೆಗಳೆಲ್ಲ ಸಾಲಿಡುವಾಗ....
ಇದೆಲ್ಲಿ ಬಂತು ಮರಿಯಾನೆ?
ಇದೆಲ್ಲಿ ಬಂತು ಪುಟ್ಟಾನೆ?

(ಕಡೆಯ ಎರಡು ಸಾಲು ಹೇಳುವಾಗ ನಿಮ್ಮ ಮುಂದೆ ಇರೋ ಪುಟ್ಟಾನೆ ಮರಿಯನ್ನು ಹಿಡಿದು ಕಚಗುಳಿ ಕೊಟ್ಟರೆ, ತುಂಬಾ ಚೆನ್ನಾಗಿರತ್ತೆ).


ಆನೆ ಹಾಡು - ೨


ಆನೆ ಬಂತೊಂದಾನೆ

ಯಾವೂರಾನೆ?

ಬಿಜಾಪುರದಾನೆ

ಇಲ್ಲೀಗ್ಯಾಕೆ ಬಂತು?

ದಾರಿ ತಪ್ಪಿ ಬಂತು

ದಾರೀಲೊಂದು ಕಾಸು,

ಬೀದೀಲೊಂದು ಕಾಸು

ಎಲ್ಲಾ ದುಡ್ಡೂ ತಗೊಂಡು

ಶೆಟ್ರಂಗ್‍ಡೀಗ್ ಹೋಗಿ,

ಕೊಬ್ರಿ ಮಿಟಾಯ್ ಕೊಂಡ್‍ಕೊಂಡು,

ಮಕ್ಕಳ್‍ಗೆಲ್ಲ ಕೊಟ್ಟು,

ತಾನೊಂಚೂರ್ ತಿಂದು,

ಆನೆ ಓಡಿ ಹೊರ್ಟ್‌‍ಹೋಯ್ತು!


(ಈ ಹಾಡು ಹೇಳುವಾಗ, ನೀವೇ ಆನೆ ಆಗಿ ನಿಮ್ಮ ಪುಟಾಣಿಗೆ ಆನೆಸವಾರಿ ಮಾಡಿಸಬೇಕು)

Thursday, July 10, 2008

ಬೆಳಗ್ಗೆ ತಿನ್ನೋಕೆ ಕರಡೀನೇ ಬೇಕು!

ಬೆಳಗ್ಗೆ ಎದ್ದ ಕೂಡ್ಲೆ ನಿಶು ಏನೇನು ತಿಂತಾನೆ? ಸೇಬು, ಕಿತ್ತಳೆ, ಸ್ಟ್ರಾಬೆರ್ರಿ, ಚೆರ್ರಿ, ಬಾಳೆಹಣ್ಣು, ದ್ರಾಕ್ಷಿ.....ಯಾವ ಹಣ್ಣಾದ್ರೂ ಆಗತ್ತೆ. ಜೊತೆಗೆ ಕರಡಿ, ಆನೆ, ಹಂದಿ, ಬಸ್ಸು, ಮೀನು, ಆಕ್ಟೋಪಸ್ಸು, ಕಂಬಳಿ ಹುಳ......ಹೀಗೆ ಇವೆಲ್ಲ ಇರ್ಲೇ ಬೇಕು! ನಿಶು ತಿನ್ನೋ ಕರಡಿ ಇಲ್ಲಿದೆ ನೋಡಿ.

ಪ್ಯಾನ್ ಕೇಕ್, ದ್ರಾಕ್ಷಿ, ಸ್ಟ್ರಾಬೆರ್ರಿ, ರಾಸ್ಬೆರ್ರಿ ಎಲ್ಲ ಸೇರಿ ಆದ ನಮ್ಮ ಕರಡಿ ಮರಿ ಇಲ್ಲಿದೆ. ನಿಮಗಿದು ಕರಡಿ ತರ ಕಾಣತ್ತೋ ಇಲ್ವೋ, ನಿಶು ಅಂತೂ ಇದು ಕರಡೀನೇ ಅಂತ ಒಪ್ಪಿಕೊಂಡಿದಾನೆ. ಹೀಗಾಗಿ ಬೆಳಗಿನ ತಿಂಡಿ ಅಷ್ಟು ಅರಾಮವಾಗಿ ಹೊಟ್ಟೆಗಿಳಿಯದ `ಸ್ಪೆಷಲ್ ದಿನ'ಗಳಲ್ಲಿ, ಅಮ್ಮನ ಮ್ಯಾಜಿಕ್‍ನಿಂದ ಪ್ಲೇಟ್ ಮೇಲೆ ಪ್ರತ್ಯಕ್ಷವಾಗೋ ಈ ಕ್ರಿಯೇಚರ್‍ಗಳು ನಿಶು ಮುಖದಲ್ಲಿ ನಗು ತುಂಬುತ್ತಾ, ಅವನ ಹೊಟ್ಟೆಯೂ ತುಂಬೋ ಹಾಗೆ ಮಾಡತ್ವೆ.
ಕರಡಿ ತಿಂಡಿ ತಿಂದ್ರೆ ಸಾಕ? ಕರಡಿ ಹಾಡು ಬೇಡ್ವ? .....ಇಲ್ಲಿದೆ ನೋಡಿ ಕರಡಿ ಹಾಡು. ವೀಡಿಯೋ ಕ್ವಾಲಿಟಿ ಅಷ್ಟು ಚೆನ್ನಾಗಿಲ್ಲ, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ...ಸರೀನಾ?


ಇಂಗ್ಲಿಷ್‍ನಲ್ಲಿರೋ ಈ ಕರಡಿ ಹಾಡು ಕನ್ನಡದಲ್ಲಿ ಹೀಗಾಗಬಹುದೇನೋ ಅನ್ನಿಸ್ತು. ನಿಮಗೆ ಏನನ್ನಿಸ್ತು? ಕನ್ನಡದಲ್ಲಿ ಈ ಮುಂಚೇನೂ, ಸುಮಾರು ಹೀಗೇ ಇದ್ದ ಕರಡಿ ಹಾಡೊಂದು ಎಲ್ಲೋ ಕೇಳಿದ್ದ ನೆನಪು. ನಿಮ್ಮಲ್ಲಿ ಯಾರಿಗಾದ್ರೂ ಆ ಹಾಡು ಗೊತ್ತಿದ್ರೆ ತಿಳಿಸಿ.

Tuesday, May 20, 2008

ಇನ್ನೊಂದು ಗಾಳಿಪಟ!!!

ಕೆಲವು ದಿನಗಳ ಹಿಂದೆ, youtube-ನಲ್ಲಿ kite festival-ವೀಡಿಯೋಗಳನ್ನ ನೋಡ್ತಿದ್ದ ಅಮ್ಮಂಗೂ ನಿಶೂಗೂ, ಅಚಾನಕ್ ಆಗಿ `ಗಾಳಿಪಟ' ಕನ್ನಡ ಸಿನಿಮಾ ಹಾಡು ಸಿಕ್ತು. ಕಾಯ್ಕಿಣಿಯವರ ಹಾಡು, ಹರಿಕೃಷ್ಣ ಮ್ಯೂಸಿಕ್ಕು, ಗಣೇಶ ಮತ್ತು ಪಾರ್ಟಿ ಮಾಡಿರೋ ಡ್ಯಾನ್ಸು.....ಎಲ್ಲಕ್ಕೂ ಪೂರ್ತಿ ಇಂಪ್ರೆಸ್ಸ್ ಆಗಿಬಿಟ್ಟ ನಿಶು, ಇನ್ನೂ ಈ ಹಾಡಿನ ಗುಂಗಿನಿಂದ ಹೊರಬಂದಿಲ್ಲ. ತಾನೇ ಕೋರಿಯಾಗ್ರಫಿ ಮಾಡಿಕೊಂಡು ಹಾಡಿ, ಕುಣಿದಿರೋ ಈ ಹಾಡು ನೀವೂ ಒಂದ್ಸಲ ನೋಡ್ಬಿಡಿ.Tuesday, April 15, 2008

ಸೃಷ್ಟಿಗೆಬದುಕಿನ ಬಯಕೆಯ ಸೃಷ್ಟಿಗೆ

ನೀಲಿ ಆಕಾಶದಲ್ಲೊಂದು
ಗಾಳಿಪಟ
ಏರುವ ಎತ್ತರ
ಬೀಸುವ ಗಾಳಿಯ ಅಧೀನ,
ಕೆಳಗೆ ಯಾರದೋ ಕೈ
ದಾರ ತೂರುವ,
ಕೆಳಗಿಳಿಸುವ
ಹುನ್ನಾರ.
ಗಿರಕಿ ಹೊಡೆದು, ನುಲಿದು
ಬಾಲಂಗೋಚಿಯ ಜೊತೆಗೆ
ಕುಣಿದು ಕುಪ್ಪಳಿಸಿ ಆಡುವ
ಸೊಗಸಿನಾಟ ಮಾತ್ರ
ಈ ಗಾಳಿಪಟಕ್ಕೇ ಮೀಸಲು.
ಮಗೂ,
ಹಾರುವ, ನಲಿಯುವ ನಿನ್ನ
ಹಂಬಲಕ್ಕೆ,
ಬಯಕೆಯ ಬಣ್ಣದ
ಬಾಲಂಗೋಚಿಗೆ
ಗಾಳಿಯ ನೆರವೊಂದಿರಲಿ
ಸದಾ.
ನೀ ಏರಿದಷ್ಟೂ ಎತ್ತರ
ನಾ ತೂರಿ ಬಿಡುವೆ ದಾರ.
ಥೇಟ್ ಖಲೀಲ್ ಗಿಬ್ರಾನ್‍ನಂತೇ
ಹೇಳುವೆ -
`ಬದುಕಿನ ಬದುಕುವ ಬಯಕೆಯ
ಸೃಷ್ಟಿ ನೀನು
ನನ್ನಿಂದ ಬಂದರೂ ಬರೀ
ನನ್ನದೇನಲ್ಲ ನೀನು.'

ಹಾರು ಮಗೂ ಹಾರು,
ಕೊನೆ ಮೊದಲಿಲ್ಲದ ಆಕಾಶ
ನಿನ್ನ ಅಂಗಳ.
ಮರಳಿ ನೀ ಬಳಿಗೆ ಬಂದಾಗೆಲ್ಲ
ಕೇಳುತ್ತೇನೆ,
`ಏನೆಲ್ಲ ಕಂಡೆ ಕಂದ
ಅಷ್ಟು ಎತ್ತರದಿಂದ?'
ಏನೇನೆಲ್ಲ ನೀ ನುಡಿವ
ಪರಿಗೆ
ನಾನು ಬೆರಗಾಗುವಷ್ಟು
ದಿನ
ಬದುಕಿನ ಬದುಕುವ ಬಯಕೆ
ಜೀವಂತ.
(ಅಮ್ಮನ ಜೊತೆಗೆ ಗಾಳಿಪಟ ಹಾರಿಸುತ್ತಿರೋ ನಿಶು...........ಮೇಲೆ ಹಾರ್ತಿರೋದು ನಮ್ಮ ಗಾಳಿಪಟಾನೆ..)


ಮೂರು ವರ್ಷಗಳ ಹಿಂದೆ ಸರಿ ಸುಮಾರು ಇದೇ ಸಮಯದಲ್ಲಿ ನಿಶು ಹುಟ್ಟುವುದಕ್ಕೆ ಸ್ವಲ್ಪ ದಿನದ ಮುಂಚೆ ಹುಟ್ಟಿದ ಕವನ ಇದು.
`ನಿಮ್ಮಿಂದ ಬಂದರೂ ನಿಮ್ಮವರಲ್ಲ ನಾವು.....ಬದುಕಿನ ಬದುಕುವ ಬಯಕೆಯ ಸೃಷ್ಟಿಗಳು ನಾವು' ಎಂಬ ನನ್ನ ಪ್ರೀತಿಯ ಕವಿ ಖಲೀಲ್ ಗಿಬ್ರಾನ್‍ನ ಸಾಲುಗಳು ಯಾಕೋ ತುಂಬಾ ನೆನಪಿಗೆ ಬರುತ್ತಿದ್ದ ದಿನಗಳು ಅವು. ಕೊಟ್ಟು-ಕೊಳ್ಳುವ ಇಂತಹ ಬಿಡುಗಡೆ ನನ್ನದೂ ಆದೀತು ಒಮ್ಮೆ ಎಂದು ಅಂದುಕೊಳ್ಳುತ್ತಾ........


*********

ಅಂದ ಹಾಗೆ, ಯೂಟ್ಯೂಬ್‍ನಲ್ಲಿ ಒಂದಷ್ಟು ಮಕ್ಕಳ ಪದ್ಯಗಳ(ಕನ್ನಡ) ವೀಡಿಯೋ ನೋಡ್ದೆ. ಕೆಲವು ಚೆನ್ನಾಗಿವೆ. ಏನೇನೆಲ್ಲ ಸರ್ಕಸ್ ಮಾಡಿದರೂ ಇಲ್ಲಿ ಅಪ್‍ಲೋಡ್ ಮಾಡೋಕೆ ಆಗ್ತಿಲ್ಲ. ಸಧ್ಯದಲ್ಲೇ ನಿಮಗೂ ತೋರಿಸುವ ಆಸೆ ಇದೆ. ಈಗಲೇ ನೋಡಬೇಕು ಅನಿಸಿದ್ರೆ ಈ ಲಿಂಕ್ ಟ್ರೈ ಮಾಡಿ.

ಬ್ಲಾಗ್ ಅಪ್ಡೇಟ್ ಮಾಡು ಅಂತ ಕಾಮೆಂಟಿಸಿ, ನನಗೇ ನೇರ ಹೇಳಿ ನನ್ನನ್ನ ಎಬ್ಬಿಸಿದ ನಿಮಗೂ, ನಿಶೂನ ಅಜ್ಜಿ, ತಾತಂಗೂ ಥ್ಯಾಂಕ್ಸ್ ಹೇಳ್ತಾ, ನಿಮ್ಮಿಂದಲೇ ಈ ಬ್ಲಾಗು ಆಗೀಗ ಉಸಿರಾಡ್ತಾ ಇರೋದು ಅಂತ ಹೇಳ್ತಾ....ಬಹುಷಃ ಮುಂದಿನ ಪೋಸ್ಟ್ ಇಷ್ಟು ತಡವಾಗ್ಲಿಕ್ಕಿಲ್ಲ ಅಂತ ಸುಳ್ಳು ಸುಳ್ಳೇ ಭರವಸೆ ಕೊಟ್ಟುಬಿಡ್ಬೇಕು ಅನ್ನೋ ಆಸೆಯನ್ನ ಅದುಮಿಟ್ಟುಕೊಳ್ಳುತ್ತಾ ಈ ಪೋಸ್ಟ್ ಮಾಡ್ತಿದ್ದೀನಿ.

Thursday, February 28, 2008

ಗೇರ್ ಗೇರ್ ಮಂಗಣ್ಣ.....

ಗೇರ್ ಗೇರ್ ಮಂಗಣ್ಣ,

ಕಡ್ಲೆಕಾಯ್ ತಿನ್ನಣ್ಣ,

ಬಾಳೆಹಣ್ಣು ನುಂಗಣ್ಣ,

ಅಲ್ಲಿಂದಿಲ್ಲಿಗೆ ಹಾರಣ್ಣ,

ಲಂಕಾಪಟ್ಣ ಸೇರಣ್ಣ,

ಸೀತೆಯನ್ನು ಹುಡುಕಣ್ಣ,

ಭೇಷ್ ಭೇಷ್ ಮಂಗಣ್ಣ!


ಶಿಶುವಿಹಾರದಲ್ಲಿದ್ದಾಗ ನೀವೂ ಈ ಹಾಡು ಕಲಿತಿದ್ರ?


ಕ್ಯೂರಿಯಸ್ ಜಾರ್ಜ್ ಜೊತೆ ನೀವೂ ಮಂಗಾಟ ಆಡ್ಬೇಕಂದ್ರೆ ಇಲ್ಲಿ ಹೋಗ್ಬೋದು.

Monday, January 28, 2008

ನಮ್ಮನೆ ಪುಟ್ಟಣ್ಣ

ನಿಶುಮರಿ


ಅಮ್ಮ ಅಂದ್ರೆ ತುಂಬಾ ಇಷ್ಟ


ಅಮ್ಮನ ಕೆನ್ನೇಗ್ ಮುತ್ತು


ಕೊಟ್ಟು, ಕೂಡ್ಲೇ ಕೇಳುತ್ತಾನೆ,


'ಕೊಡ್ತೀಯಾ ಬಿಸ್ಕತ್ತು?'ಅಪ್ಪನ ಕಂಡ್ರೂ ತುಂಬಾ ಪ್ರೀತಿ


ಅಪ್ಪಾನೇ ಬೆಸ್ಟ್ ಫ್ರೆಂಡು,


ಮನೆಯೊಳಗೇನೇ ಆಡ್ತಿರ್ತಾರೆ

ಇಬ್ರೂನೂ ಕಾಲ್ಚೆಂಡು!
ನನ್ನ ಚಿನ್ನ ನನ್ನ ರನ್ನ
ದಿನವೂ ಒಂದೊಂದ್ ಬಣ್ಣ
ಹಚ್ಕೊಂಡ್ ಬರ್ತಾನ್ ಅಂಗೀಗೆಲ್ಲಾ
ಡೇಕೇರಿಂದ ಚಿಣ್ಣ.


ಬೇಕೇಬೇಕು ಕೇಳಿದ್ದೆಲ್ಲಾ
ಕೊಡ್ದೆ ಇದ್ರೆ ಟೂ..ಟೂ ..
ಹುಬ್ಬು ಕೊಂಕಿಸಿ, ಕೆನ್ನೆ ಉಬ್ಬಿಸಿ
ಮೂಲೇಲ್ ನಿಲ್ತಾನ್ ಛೋಟೂ.ಯಾಕೆ?, ಏನು?, ಹ್ಯಾಗೆ?, ಎಲ್ಲಿ?
ಎಷ್ಟೊಂದಿದೆ ಪ್ರಶ್ನೆಗಳು!
ತ್ರ ಹೇಳೀ ಹೇಳೀ
ನಂತಲೆಯಾಯ್ತು ಸಾವಿರ ಹೋಳುಗಳು.Friday, January 04, 2008

ಕಾ ಕಾ ಕಾಗೆ

ನೀರು ಮೇಲೆ ಬರಲಿಕ್ಕೆ ಹೂಜಿ ತುಂಬಾ ಕಲ್ಲು ತಂದು ಹಾಕಿದ ಜಾಣ ಕಾಗೆಯ ಹಾಗೇ ನರಿ ಹೊಗಳಿದ್ದಕ್ಕೆ ಬಾಯಿಬಿಟ್ಟು, ಕಜ್ಜಾಯ ಕಳೆದುಕೊಂಡ ಕಾಗೆಯೂ ನನಗಿಷ್ಟ. ಹಾಗೆ ಕಾಗೆ ಇಷ್ಟವಾಗಲಿಕ್ಕೆ ಕಾರಣ, ಚಿಕ್ಕವಳಿದ್ದಾಗ ನಾನು ಓದಿದ ರಾಜರತ್ನಂರ ಕಾಗೆಯ ಕುರಿತ ಪದ್ಯ ಮತ್ತು ನಂತರದ ದಿನಗಳಲ್ಲಿ ಮೆಚ್ಚಿಕೊಂಡ ಆರ್. ಕೆ. ಲಕ್ಷ್ಮಣರ ಕ್ಯಾರಿಕೇಚರ್ ಕಾಗೆ. ಈಗ ಹತ್ತು ವರ್ಷಗಳ ಕೆಳಗೆ ಪನ್ನೇರಳೆ ಹಣ್ಣಿಗಾಗಿ ಮರ ಹತ್ತಿ, ಅದೇ ಮರದಲ್ಲಿ ಗೂಡು ಕಟ್ಟಿದ್ದ ಕಾಗೆಯೊಂದರ ಕೈಲಿ(ಕೊಕ್ಕಲ್ಲಿ!) ಬೆರಳಿಗೆ ಕುಟುಕಿಸಿಕೊಂಡು ಗಾಯ ಮಾಡಿಕೊಂಡಿದ್ದು ನೆನಪಾಗ್ತಿದೆ. ಆ ಕಾಗೆಯಂತೂ ಲಕ್ಷ್ಮಣರ ಕಾಗೆಗಿಂತ ಹೆಚ್ಚಿನ ಪರ್ಸನಾಲಿಟಿ ಹೊಂದಿತ್ತು ಅನ್ನಿಸ್ತಿದೆ.
ರಾಜರತ್ನಂ ಪದ್ಯ ಇಲ್ಲಿದೆ:ಕರ್ರಗಿರುವ ಕಾಗೆಯೊಂದು,

ಭರ್ರ್ ಎಂದು ಹಾರಿ ಬಂದು,

ಸರ್ರ್ ಎಂದು ಸುತ್ತಿ ತಿರುಗಿ

ಕೆಳಗೆ ನೋಡಿತು.


ಸರ್ರ್ ಎಂದು ಸುತ್ತಿ ತಿರುಗಿ,

ಜರ್ರ್ ಎಂದು ಜಾರುವಾಗ,

ಪರ್ರ್ ಎಂದು ಅದರ ರೆಕ್ಕೆ

ಹರಿದು ಹೋಯಿತು.ದ್ವಿತೀಯಾಕ್ಷರ ಪ್ರಾಸದ ಈ ಪದ್ಯ ನನಗೂ, ನಿಶೂಗೂ ಅಚ್ಚುಮೆಚ್ಚು. `ಕಂದನ ಕಾವ್ಯ' ಅನ್ನೋ ಹೆಸರಿನ ಪುಸ್ತಕದಲ್ಲಿರೋ ಈ ಪದ್ಯವನ್ನ ನನಗೆ ನೆನಪಲ್ಲಿ ಇರುವ ಹಾಗೆ ಬರೆದಿದ್ದೀನಿ. ಇದರ ಸರಿಯಾದ ಪಾಠ ಯಾರಿಗಾದರೂ ಗೊತ್ತಿದ್ದಲ್ಲಿ ಕಳುಹಿಸಿಕೊಡಿ.

*****

ಈ ಕಾಗೆ ಪದ್ಯ ನನಗೆ ನೆನಪಾಗಲಿಕ್ಕೆ ಕಾರಣರಾದವರು, ನಿಶುಮನೆಗೆಂದು ತಮಗೆ ಸಿಕ್ಕ ಪದ್ಯವೊಂದನ್ನ ನನಗೆ ಕಳುಹಿಸಿಕೊಟ್ಟ ಶೀಲಾ. ಅವರಿಗೆ ಧನ್ಯವಾದ. `ಕ' ಅಕ್ಷರದ ಕಾಗುಣಿತವನ್ನ ಆಧರಿಸಿ ಬರೆದಿರುವ ಈ ಪದ್ಯದ ಕಡೆಯ ಸಾಲಿನ ಅರ್ಥ ನನಗೆ ತಿಳಿಯಲಿಲ್ಲ. 'ಕಃಫಿಕ' ಎಂದರೆ ಏನೆಂದು ನನಗೆ ಗೊತ್ತಿಲ್ಲ. ಕಡೆಯ ಸಾಲಿನಲ್ಲಿ 'ಕಃ' ಬರಬೇಕೆಂಬ ಕಾರಣಕ್ಕೆ ಹಾಗೆ ಬರೆದಿದ್ದಾರ? ನಿಮಗ್ಯಾರಿಗಾದರೂ ಗೊತ್ತಿದ್ದರೆ ತಿಳಿಸಿಕೊಡಿ

****

ಶೀಲಾ ಅವರು ನನಗೆ ಬರೆದದ್ದು ಇಲ್ಲಿದೆ:


ಮೀರಾ, ಇದು ನನಗ "ಸುಧಾ" ಪತ್ರಿಕೆಯಲ್ಲಿ ಸಿಕ್ಕಿತು. ಓದಿದ ಕೂಡಲೆ ನಿಮ್ಮ ನೆನಪಾಯಿತು. ಇಲ್ಲಿ ಅಂಟಿಸಿದ್ದೇನೆ. ಆಕರ್ಷಕವಾಗಿ ಮಾಡಿ ನಿಮ್ಮ ಬ್ಲಾಗಿನಲ್ಲಿ ಹಾಕುವುದಾದರೆ ಹಾಕಿ.

ಕ, ಕಾ....ಬಳ್ಳಿ
ಕಪ್ಪಿನ ಬಣ್ಣದ ಹಕ್ಕಿಯು ಅಹ!ಹಾ!
ಕಾ ಕಾ ಎನ್ನುತ ಹಾರುತಿದೆ.

ಕಿಟ್ಟನ ಮನೆಯ ಅಂಗಳದಲ್ಲಿಹ ಕೀಟಗಳನದು ತಿನ್ನುತಿದೆ.
ಕುಲವೇ ಕಲಿತಹ ಹಿರಿಗುಣವೊಂದಿದೆ
ಕೂಟವ ಕಟ್ಟುವ ಓ ಬುದ್ಧಿ.
ಕೆಲಸದಿ ಶ್ರದ್ಧಾಭಕ್ತಿಯು ತುಂಬಿದೆ ಕೇಳಿರಿ ನಿಮಗಿದು ಸದ್ಬುದ್ಧಿ.
ಕೈಗದು ಬಾರದು ದಾಸ್ಯವನೊಪ್ಪದು
ಕೊಟ್ಟೇ ತಿಂಬುದ ಯೋಚಿಸಿರಿ.
ಕೋಗಿಲೆಯಂಥಾ ಮೈ ಬಣ್ಣದ ಅದು
ಕೌ ಎನ್ನಲು ಕಲ್ಲೆಸಯದಿರಿ
ಕಂಠವು ಕರ್ಕಶವಾದರೂ ಕಾಗೆಯು
ಕಃಫಿಕವಲ್ಲೈ ಹಳೆಯದಿರಿ.


ಎಲ್. ಎಸ್. ಹೆಗಡೆಯವರು ಅವರ ಶಿಕ್ಷಕರು ೪೫ ವರ್ಷಗಳ ಹಿಂದೆ ಹೇಳಿಕೊಟ್ಟದ್ದನ್ನು ಸುಧಾ ಪತ್ರಿಕೆಗೆ ಕಳುಹಿಸಿಕೊಟ್ಟಿದ್ದಾರೆ.

- ಶೀಲಾ.

ಕಾಗೆ ಹಾಡು ಇಲ್ಲಿದೆ!

ಹೊಸವರ್ಷಕ್ಕೆ ಶುಭ ಹಾರೈಸುವ ಮೊದಲೇ ಡ್ರಾಫ್ಟ್ ಮಾಡಿದ್ದ 'ಕಾ ಕಾ ಕಾಗೆ' ಹೆಸರಿನ ನನ್ನ ಪೋಸ್ಟ್, ಏನು ಮಾಡಿದರೂ recent post ಅಂತ ಎಲ್ಲಕ್ಕಿಂತ ಮೇಲೆ ಹಾಕಲು ಆಗ್ತಿಲ್ಲ. ಹೊಸವರ್ಷದ ಪುಟ ಸ್ಕ್ರಾಲ್ ಮಾಡುತ್ತ ಕೆಳಗಿಳಿದರೆ, ನೀವಿದನ್ನ ನೋಡಬಹುದು. ನೋಡಿ, ಕಾಮೆಂಟಿಸಿ.


ಈ ಸಮಸ್ಯೆಗೆ ಚೇತನ್ ಪರಿಹಾರ ಸೂಚಿಸಿ, ಇದು 'ರೀಸೆಂಟ್ ಪೋಸ್ಟ್' ಆಗುವ ಹಾಗೆ ಮಾಡಿದ್ದಾರೆ. ಕಾಗೆ ಬುದ್ಧಿವಂತಿಕೆಯಿಂದ ಹೂಜಿಯಲ್ಲಿ ನೀರು ಮೇಲೆ ಬಂದ ಹಾಗೇ ಈ ಬರಹವೂ ಮೇಲೆ ಬಂದಿದೆ. ಚೇತನ್-ಗೆ ಥ್ಯಾಂಕ್ಸ್ ಹೇಳುತ್ತಾ, ಕೆಲವಂ ಬಲ್ಲವರಿಂದ ಕಲಿಯುವ ಖುಶಿ ಅನುಭವಿಸುತ್ತಾ......

Tuesday, January 01, 2008

HAPPY NEW YEAR

ಎಲ್ಲರಿಗೂ ಹೊಸವರ್ಷದ ಶುಭಾಶಯಗಳು


ಹೊಸವರ್ಷ ಹ್ಯಾಗೆ ಬರತ್ತೆ? ಆನೆ ಹತ್ತಿ ಬರತ್ತಾ?..ಅಂತ ನಿಶು ಕೇಳ್ತಿದ್ದಾನೆ. ನಾನು, ಇವನು ಇಬ್ರೂ 'ಹೌದು' ಅಂತ ಹೇಳಿದ್ದೇವೆ.