Tuesday, April 15, 2008

ಸೃಷ್ಟಿಗೆ



ಬದುಕಿನ ಬಯಕೆಯ ಸೃಷ್ಟಿಗೆ

ನೀಲಿ ಆಕಾಶದಲ್ಲೊಂದು
ಗಾಳಿಪಟ
ಏರುವ ಎತ್ತರ
ಬೀಸುವ ಗಾಳಿಯ ಅಧೀನ,
ಕೆಳಗೆ ಯಾರದೋ ಕೈ
ದಾರ ತೂರುವ,
ಕೆಳಗಿಳಿಸುವ
ಹುನ್ನಾರ.
ಗಿರಕಿ ಹೊಡೆದು, ನುಲಿದು
ಬಾಲಂಗೋಚಿಯ ಜೊತೆಗೆ
ಕುಣಿದು ಕುಪ್ಪಳಿಸಿ ಆಡುವ
ಸೊಗಸಿನಾಟ ಮಾತ್ರ
ಈ ಗಾಳಿಪಟಕ್ಕೇ ಮೀಸಲು.
ಮಗೂ,
ಹಾರುವ, ನಲಿಯುವ ನಿನ್ನ
ಹಂಬಲಕ್ಕೆ,
ಬಯಕೆಯ ಬಣ್ಣದ
ಬಾಲಂಗೋಚಿಗೆ
ಗಾಳಿಯ ನೆರವೊಂದಿರಲಿ
ಸದಾ.
ನೀ ಏರಿದಷ್ಟೂ ಎತ್ತರ
ನಾ ತೂರಿ ಬಿಡುವೆ ದಾರ.
ಥೇಟ್ ಖಲೀಲ್ ಗಿಬ್ರಾನ್‍ನಂತೇ
ಹೇಳುವೆ -
`ಬದುಕಿನ ಬದುಕುವ ಬಯಕೆಯ
ಸೃಷ್ಟಿ ನೀನು
ನನ್ನಿಂದ ಬಂದರೂ ಬರೀ
ನನ್ನದೇನಲ್ಲ ನೀನು.'

ಹಾರು ಮಗೂ ಹಾರು,
ಕೊನೆ ಮೊದಲಿಲ್ಲದ ಆಕಾಶ
ನಿನ್ನ ಅಂಗಳ.
ಮರಳಿ ನೀ ಬಳಿಗೆ ಬಂದಾಗೆಲ್ಲ
ಕೇಳುತ್ತೇನೆ,
`ಏನೆಲ್ಲ ಕಂಡೆ ಕಂದ
ಅಷ್ಟು ಎತ್ತರದಿಂದ?'
ಏನೇನೆಲ್ಲ ನೀ ನುಡಿವ
ಪರಿಗೆ
ನಾನು ಬೆರಗಾಗುವಷ್ಟು
ದಿನ
ಬದುಕಿನ ಬದುಕುವ ಬಯಕೆ
ಜೀವಂತ.




(ಅಮ್ಮನ ಜೊತೆಗೆ ಗಾಳಿಪಟ ಹಾರಿಸುತ್ತಿರೋ ನಿಶು...........ಮೇಲೆ ಹಾರ್ತಿರೋದು ನಮ್ಮ ಗಾಳಿಪಟಾನೆ..)


ಮೂರು ವರ್ಷಗಳ ಹಿಂದೆ ಸರಿ ಸುಮಾರು ಇದೇ ಸಮಯದಲ್ಲಿ ನಿಶು ಹುಟ್ಟುವುದಕ್ಕೆ ಸ್ವಲ್ಪ ದಿನದ ಮುಂಚೆ ಹುಟ್ಟಿದ ಕವನ ಇದು.
`ನಿಮ್ಮಿಂದ ಬಂದರೂ ನಿಮ್ಮವರಲ್ಲ ನಾವು.....ಬದುಕಿನ ಬದುಕುವ ಬಯಕೆಯ ಸೃಷ್ಟಿಗಳು ನಾವು' ಎಂಬ ನನ್ನ ಪ್ರೀತಿಯ ಕವಿ ಖಲೀಲ್ ಗಿಬ್ರಾನ್‍ನ ಸಾಲುಗಳು ಯಾಕೋ ತುಂಬಾ ನೆನಪಿಗೆ ಬರುತ್ತಿದ್ದ ದಿನಗಳು ಅವು. ಕೊಟ್ಟು-ಕೊಳ್ಳುವ ಇಂತಹ ಬಿಡುಗಡೆ ನನ್ನದೂ ಆದೀತು ಒಮ್ಮೆ ಎಂದು ಅಂದುಕೊಳ್ಳುತ್ತಾ........


*********

ಅಂದ ಹಾಗೆ, ಯೂಟ್ಯೂಬ್‍ನಲ್ಲಿ ಒಂದಷ್ಟು ಮಕ್ಕಳ ಪದ್ಯಗಳ(ಕನ್ನಡ) ವೀಡಿಯೋ ನೋಡ್ದೆ. ಕೆಲವು ಚೆನ್ನಾಗಿವೆ. ಏನೇನೆಲ್ಲ ಸರ್ಕಸ್ ಮಾಡಿದರೂ ಇಲ್ಲಿ ಅಪ್‍ಲೋಡ್ ಮಾಡೋಕೆ ಆಗ್ತಿಲ್ಲ. ಸಧ್ಯದಲ್ಲೇ ನಿಮಗೂ ತೋರಿಸುವ ಆಸೆ ಇದೆ. ಈಗಲೇ ನೋಡಬೇಕು ಅನಿಸಿದ್ರೆ ಈ ಲಿಂಕ್ ಟ್ರೈ ಮಾಡಿ.

ಬ್ಲಾಗ್ ಅಪ್ಡೇಟ್ ಮಾಡು ಅಂತ ಕಾಮೆಂಟಿಸಿ, ನನಗೇ ನೇರ ಹೇಳಿ ನನ್ನನ್ನ ಎಬ್ಬಿಸಿದ ನಿಮಗೂ, ನಿಶೂನ ಅಜ್ಜಿ, ತಾತಂಗೂ ಥ್ಯಾಂಕ್ಸ್ ಹೇಳ್ತಾ, ನಿಮ್ಮಿಂದಲೇ ಈ ಬ್ಲಾಗು ಆಗೀಗ ಉಸಿರಾಡ್ತಾ ಇರೋದು ಅಂತ ಹೇಳ್ತಾ....ಬಹುಷಃ ಮುಂದಿನ ಪೋಸ್ಟ್ ಇಷ್ಟು ತಡವಾಗ್ಲಿಕ್ಕಿಲ್ಲ ಅಂತ ಸುಳ್ಳು ಸುಳ್ಳೇ ಭರವಸೆ ಕೊಟ್ಟುಬಿಡ್ಬೇಕು ಅನ್ನೋ ಆಸೆಯನ್ನ ಅದುಮಿಟ್ಟುಕೊಳ್ಳುತ್ತಾ ಈ ಪೋಸ್ಟ್ ಮಾಡ್ತಿದ್ದೀನಿ.