Saturday, December 08, 2007

ಉಂಡಾಡಿ ಗುಂಡ

ಉಂಡಾಡಿ ಗುಂಡನ ಹಾಡು ಗೊತ್ತಾ ನಿಮ್ಗೆ? ಇನ್ನೂ ಬೇಕು, ಇನ್ನೂ ಬೇಕು ಅಂತ ತಿಂತಾನೇ ಇದ್ರೆ, ಏನಾಗತ್ತೆ ಗೊತ್ತು ತಾನೆ!



ಉಂಡಾಡಿ ಗುಂಡ

ಆಲೂಗೆಡ್ಡೆ ಬೋಂಡ

ಮದ್ವೆ ಮನೇಗ್ ಹೋದ

ಹತ್ತು ಲಾಡು ತಿಂದ

ಹೊಟ್ಟೆ ನೋವು ಎಂದ

ಅಮ್ಮ ಬೆಣ್ಣೆ ಕೊಟ್ಟಳು

ಇನ್ನೂ ಬೇಕು ಅಂದ

ಅಪ್ಪ ದೊಣ್ಣೆ ತಂದನು

ಕೈ ಕಟ್, ಬಾಯ್ ಮುಚ್ಚ್

ಗಪ್ ಚಿಪ್ ಶ್..............

Sunday, November 11, 2007

ಕಥೆ : ರಾಜನ ಕಷ್ಟ

ಮಕ್ಕಳ ಕಥೆಗಳು ಹೇಗಿರಬೇಕು? ನೀತಿ ಬೋಧಿಸಲೆಂದೇ ಅದಕ್ಕೊಂದು ಕಥೆ ಹೆಣೆದು, ನೀತಿಯ ಭಾರದಿಂದ ಜಗ್ಗುವ ಕಥೆಗಳು ತೀರಾ ಪುಟ್ಟ ಮಕ್ಕಳಿಗೆ ಬೇಕ? ಅಥವ ಸುಮ್ಮನೆ ಅವರ ಕುಥೂಹಲ ಕೆರಳಿಸುವ, ಕಣ್ಣು ಅರಳಿಸುವ, ಕಲ್ಪನೆ ಗರಿಗೆದರಿಸುವ, ನಿರ್ದಿಷ್ಟ ನಿಯಮ, ಬಂಧ ಯಾವುವೂ ಇರದ ಕಥೆಗಳು ಬೇಕ? ನನಗೇನೋ ಈ ಎರಡನೆ ಮಾದರಿಯವೇ ಇಷ್ಟ. ಅದರಲ್ಲೂ ನಾನು ಹೇಳುವ ಕಥೆಗಳಲ್ಲಿ, ನಿಶುವನ್ನೇ ಒಂದು ಪಾತ್ರವಾಗಿಸಿ, ಅವನು ಆಡುವಂಥದ್ದೇ ಮಾತುಗಳನ್ನ ಹಾಕಿ, ಕಥೆ ಕೇಳುವಾಗ ಚೂರೇ ಬಿಡುವ ಅವನ ಬಾಯಿ, ಅರಳುವ ಅವನ ಕಣ್ಣು, ಮುಖ ನೋಡುತ್ತ, ಕಥೆಯನ್ನ ಇನ್ನೂ ಇನ್ನೂ 'ಸಿಲ್ಲಿ'ಯಾಗಿಸುತ್ತಾ, ಅವನನ್ನ ನಗಿಸುತ್ತಾ ಹೋಗೋದು ಅಂದರೆ ನನಗೆ ತುಂಬಾ ಇಷ್ಟ. ಅಂತ ಒಂದು ಕಥೆ ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ....




ರಾಜನ ಕಷ್ಟ




ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೆ ಮೂರು ಜನ ಮಕ್ಕಳು. ಮೊದಲನೆ ಮಗು ಹೆಸ್ರು 'ನಿ' ಅಂತ. ಎರಡನೆ ಮಗು 'ಶಾಂ', ಮೂರನೇ ಮಗು, 'ತ್'. ಮೂರೂ ಮಕ್ಕಳನ್ನೂ ಒಟ್ಟಿಗೇ ಕರೆಯುವಾಗ ಆ ರಾಜ ಅವರ ಹೆಸರನ್ನೆಲ್ಲ ಒಟ್ಟಿಗೆ ಸೇರಿಸಿ 'ನಿಶಾಂತ್.....' ಅಂತ ಕೂಗ್ತಿದ್ದ. ಹಾಗೆ ಅವನು ಕೂಗಿದಾಗೆಲ್ಲ 'ನಿ', 'ಶಾಂ', 'ತ್' ಮೂರೂ ಮಕ್ಕಳೂ ಓಡಿ ಓಡಿ ಬರ್ತಿದ್ರು. ಜೊತೆಗೆ ಈ 'ನಿಶಾಂತ್' ಕೂಡ ಓಡಿ ಹೋಗಿ ರಾಜನ ಮುಂದೆ ನಿಂತುಬಿಡ್ತಿದ್ದ. ರಾಜ ಇವನನ್ನ ನೋಡಿ ಕೇಳ್ತಿದ್ದ,
'ನಾನು ಕರೆದಿದ್ದು ನನ್ನ ಮಕ್ಕಳನ್ನ. ನೀನ್ಯಾಕಪ್ಪ ಬಂದೆ?'
ಅದಕ್ಕೆ ನಿಶಾಂತ್ ಹೇಳ್ತಿದ್ದ,
'ಮತ್ತೆ ನೀವು ನಿಶಾಂತ್ ಅಂತ ಕೂಗಿ ಕರೆದ್ರಲ್ಲ, ಅದು ನನ್ನ ಹೆಸ್ರು. ನೀವು ಹಾಗೆ ಕರೆದಿದ್ದಕ್ಕೆ ಬಂದೆ'.
ಪ್ರತಿ ಸಲವೂ ಹೀಗೇ ಆಗ್ತಿತ್ತು. ರಾಜ ಅವನ ಮಕ್ಕಳನ್ನ ಒಟ್ಟಿಗೆ ಕೂಗಿ ಕರೆದಾಗೆಲ್ಲ, ಆ ಮೂರು ಮಕ್ಕಳ ಜೊತೆ ನಿಶಾಂತ್ ಕೂಡ ಹೋಗಿ ನಿಂತು ಬಿಡ್ತಾನೆ. ಕೇಳಿದ್ರೆ,
'ನೀವು ನನ್ನ ಹೆಸ್ರನ್ನೇ ತಾನೆ ಕೂಗಿದ್ದು' ಅಂತಾನೆ.
ರಾಜನಿಗೆ ದೊಡ್ಡ ಪಜೀತಿ. ಅವನಿಗೆ ಹೀಗಾದಾಗಲೆಲ್ಲ ಏನ್ ಮಾಡಬೇಕು ಅಂತ ಗೊತ್ತಾಗ್ದೆ ತಲೆ ಮೇಲೆ ಕೈ ಹೊತ್ತು ಕುಳಿತು ಬಿಡ್ತಾನೆ. ಆ ದೊಡ್ಡ ರಾಜನ ಪಜೀತಿ ನೋಡಿ ಈ ನಾಲ್ಕು ಮಕ್ಕಳಿಗೂ ಜೋರಾಗಿ ನಗು ಬಂದು ಬಿಡತ್ತೆ. ಜೋರಾಗಿ ನಗ್ತಾ, ಹೋ ಅಂತ ಕೂಗ್ತ ಈ ಮಕ್ಕಳೆಲ್ಲ ಆ ರಾಜನ ಅರಮನೆಯೊಳಗೆಲ್ಲ ಗಲಾಟೆ ಮಾಡ್ಕೊಂಡು ಆಟ ಆಡೋಕೆ ಶುರು ಮಾಡ್ತಾರೆ.
- - - - - - - - - - - - - - - - - - - - - - - - - - -
ಈ ಕಥೆ ಬರೆಯುವಾಗ ನನಗೆ ಕನ್ನಡದಲ್ಲಿ ೩ ಎಂಬುದನ್ನ ಅಕ್ಷರದಲ್ಲಿ ಬರೆಯೋದಕ್ಕಾಗ್ದೆ ಸಾಕಷ್ಟು ಒದ್ದಾಡಿದ್ದಾಯ್ತು. ಕಡೆಗೂ 'ಮೂರು' ಅಂತಲೇ ಟೈಪ್ ಮಾಡಬೇಕಾಯ್ತು. ಬರಹದಲ್ಲಿ ಸರಿಯಾಗಿ ಬರೆಯೋಕ್ಕಾದ್ರೂ ಅದನ್ನ ಬ್ಲಾಗ್-ಗೆ ಹಾಕುವಾಗ ಪ್ರತಿಬಾರಿಯೂ 'ಮೂರು' ಅಂತಲೇ ಬರ್ತಿದೆ. ಓದುವಾಗ ನೀವು ಸರಿಯಾಗಿ ಓದಿಕೊಂಡುಬಿಡಿ ಮತ್ತು ನಿಮಗೆ ಯಾರಿಗಾದರೂ ಇದನ್ನ ಹ್ಯಾಗೆ ಸರಿ ಮಾಡೋದು ಗೊತ್ತಿದ್ರೆ ದಯವಿಟ್ಟು ತಿಳಿಸಿಕೊಡಿ.
'ಮೂ' ಸರಿ ಹೋಯ್ತು!
ಈ ಪೋಸ್ಟ್ ಹಾಕಿದ ೨೪ ಘಂಟೆ ಒಳಗೇ ನನಗೆ 'ಮೂ' ಸಮಸ್ಯೆಗೆ ಪರಿಹಾರ ಸಿಕ್ಕಿಬಿಡ್ತು. ಕನ್ನಡ ಬ್ಲಾಗಿಗರು ಎಷ್ಟು active-ಆಗಿ ಇದ್ದಾರಲ್ಲ ಅನ್ನಿಸಿ ತುಂಬಾ ಖುಷಿ ಆಗ್ತಿದೆ. ಅದಕ್ಕೆ ದಿನೇ ದಿನೇ ಕನ್ನಡ ಅರಳಿಕೊಳ್ತಾ ಇದೆ, ವೆಬ್ ಲೋಕದಲ್ಲಿ. ಪರಿಹಾರ ಸೂಚಿಸಿದ ಶ್ರೀ, ಸುಶ್ರುತ ಇಬ್ಬರಿಗೂ ತುಂಬಾ ಥ್ಯಾಂಕ್ಸ್.
- - - - - - - - - - - - - - - - - - - - - - - - - - - - - - - - - -
ನಿಶೂಗೆ ತುಂಬಾ ಇಷ್ಟವಾದ ಕಥೆಯೊಂದು ಇಲ್ಲಿದೆ. ನೀವೂ ನೋಡಿ.










Thursday, September 13, 2007

ತಾಚಿ ಮಾಡ್ತಿರೋ ನಿಶುಮನೆಯಲ್ಲಿ ಒಂದು ಲಾಲಿಹಾಡು


Indiaದಿಂದ ನಮ್ಮತ್ತೆ ಬಂದಿದ್ದಾರೆ. ಸಿಕ್ಕಾಪಟ್ಟೆ ಕೆಲ್ಸ. cooking-cleaning ಚಕ್ರದಲ್ಲಿ ಸುತ್ತುಹೊಡೀತಿರೋ ನಂಗೆ ಬೇರೆ ಯಾವ ಕೆಲ್ಸಕ್ಕೂ ಸಮಯಾನೇ ಸಿಗ್ತಿಲ್ಲ. ಹೀಗಾಗಿ ನಿಶುಮನೆ ಸ್ವಲ್ಪ ದಿನದಿಂದ ನಿದ್ದೆ ಮಾಡ್ತಿದೆ. 'ಯಾಕೆ update ಮಾಡ್ತಿಲ್ಲ' ಅಂತ ನೀವೆಲ್ಲ ಹೀಗೇ ಆಗಾಗ ಒಂಚೂರು ಚುಚ್ಚಿ ಎಚ್ಚರಿಸ್ತಾ ಇರಿ.....

ಈ ಮಲಗಿರೋ ಡೈನೋಸಾರನ್ನ ಎಬ್ಬಿಸೋದು ಹ್ಯಾಗೆ?


ಕುಲಾವಿ ಹೆಣೆಯೋಕೆ ಬರದ ಈ ಅಮ್ಮ, ನಿಶು ಹುಟ್ಟೋಕೆ ಮುಂಚೆ ಅವನಿಗೆ ಅಂತ ಹೆಣೆದಿದ್ದು ಈ ಲಾಲಿಹಾಡು. thatskannadaದಲ್ಲಿ ಪ್ರಕಟವಾಗಿದ್ದ ಈ ಹಾಡು ಇಲ್ಲಿ ಮತ್ತೆ ಕೊಡ್ತಿದ್ದೀನಿ, ನಿಶುವಿನ ಕೆಲವು ಹಳೆಯ ಚಿತ್ರಗಳ ಜೊತೆಗೆ. ನಿಮಗೆ ಇಷ್ಟವಾಯ್ತಾ ಇಲ್ವಾ ತಿಳಿಸ್ತೀರಾ?


ಲಾಲಿಹಾಡು
_______

ಮುತ್ತಿನಾರತಿ ತಂದು ಎತ್ತಿ ಬೆಳಗೀರೇ.....
ಮುದ್ದು ಮಾತಾಡೊ ನನ್ನರಗಿಳಿಗೆ ಕಂದಂಗೆ
ಮುತ್ತಿನಂಥಾ ನನ್ನ ಮಗುವೀಗೆ.........
ಜೋ..ಜೊ........ಜೋ...ಜೊ..............


ಮಣ್ಣೀನ ಗಂಧಾಕೆ ಸೋಲುವಾ ಮನಸಿರಲಿ
ಹಕ್ಕಿಯಂತೆ ಹಾರೊ ಕನಸಿರಲಿ ಕಣ್ತುಂಬ
ನಕ್ಷತ್ರದಾ ಬೆಳಕು ತುಂಬಿರಲೀ..........
ಜೋ...ಜೊ........ಜೋ....ಜೊ..........


ಉರಿಯುವಾ ನೇಸರ ತಣ್ಣಾನೆ ಚಂದಿರ
ಹಾಡು ಹಕ್ಕಿಯು ಹಸಿರು ಇರುವಂಥ ಈ ನೆಲವು
ನಿನ್ನ ನಗುವಿಂದಲೆ ಚೆಲುವಾಯಿತು............
ಜೋ...ಜೊ........ಜೋ.....ಜೊ...........


ಮುತ್ತಿನಾ ಮಣಿ ನೀನು ಮುದ್ದಿನಾ ಗಿಣಿ ನೀನು
ಹೊನ್ನಿನಾ ಗಣಿ ನೀನು ನನ್ನೆದೆಗೆ ಕಂದಯ್ಯ
ಬಣ್ಣಾದ ರಂಗೋಲಿ ಅಂಗಳಕೇ............
ಜೋ...ಜೊ..........ಜೋ...ಜೊ.............


Wednesday, August 08, 2007

ಮುದ್ದು ಕನ್ನಡ


ವರ್ಷಗಳ ಹಿಂದೆ ಹೀಗೇ ಸುಮ್ಮನೇ ವೆಬ್-ನಲ್ಲಿ ಸುತ್ತು ಹೊಡೀತ, ಮಕ್ಕಳಿಗೆ ಅಂತ ಕನ್ನಡ ಅಂತರ್ಜಾಲದಲ್ಲಿ ಏನೇನಿದೆ ಅಂತ ಹುಡುಕಿ, ಅಂಥಾದ್ದೇನೂ ಸಿಕ್ಕದೆ ನಿರಾಶೆಯಾಗಿತ್ತು. ಮಕ್ಕಳಿಗೆ ಸಂಬಂಧಿಸಿದ ವೆಬ್-ಸೈಟುಗಳೂ, ಬ್ಲಾಗ್-ಗಳೂ ಕನ್ನಡದಲ್ಲಿ ಇಲ್ಲವೇ ಇಲ್ಲ ಅನ್ನಿಸುವಷ್ಟು ಕಡಿಮೆ ಇರೋದು ಗಮನಕ್ಕೆ ಬಂತು. ಕೆಲವು ಇಂಡಿಯನ್ ಪೇರೆಂಟಿಂಗ್ ಸೈಟ್-ಗಳಲ್ಲಿ ಬೇರೆ ಭಾರತೀಯ ಭಾಷೆಗಳ ಜೊತೆಗೆ ಕನ್ನಡ ಅಕ್ಷರ ಮಾಲೆಯೋ, ಒಂದೆರಡು ಕತೆ-ಕವಿತೆಯೋ ಇರೋದು ಬಿಟ್ಟರೆ ಹೆಚ್ಚಿಗೆ ಆಸಕ್ತಿ ಹುಟ್ಟಿಸುವಂಥಾದ್ದೇನೂ ಕಾಣಲೇ ಇಲ್ಲ. ಇನ್ನೊಮ್ಮೆ ಈ ಅಂತರ್ಜಾಲವನ್ನೆಲ್ಲ ಜಾಲಾಡಿ ಸಧ್ಯದಲ್ಲೇ ಒಂದಿಷ್ಟು links ಕೊಡುವ ಯೋಚನೆ ಇದೆ. ನಿಮ್ಮಲ್ಲಿ ಯಾರಿಗಾದರೂ ಮಕ್ಕಳಿಗೆ ಸಂಬಂಧಿಸಿದ ಕನ್ನಡದಲ್ಲಿರುವ ವೆಬ್ ತಾಣಗಳು ಗಮನಕ್ಕೆ ಬಂದಲ್ಲಿ ದಯವಿಟ್ಟು ಇಲ್ಲಿ ಹಂಚಿಕೊಳ್ಳಿ.
ಸಮಯ ಸಿಕ್ಕಾಗ, ಮೂಡ್ ಬಂದಾಗ ಅಂತ ಅಪ್ಡೇಟ್ ಆಗಲು ನೂರಾರು ನೆಪಗಳನ್ನಿಟ್ಟುಕೊಂಡಿರುವ ಈ 'ನಿಶುಮನೆ'ಯಂತಲ್ಲದೆ, ಸಾಕಷ್ಟು active ಆದ ಒಂದಿಷ್ಟು ಮಕ್ಕಳ ಬ್ಲಾಗುಗಳು ಕನ್ನಡದಲ್ಲಿ ಶುರುವಾದರೆ ಚೆನ್ನಾಗಿರತ್ತಲ್ಲ ಅನ್ನಿಸುತ್ತಿರುವಾಗಲೇ,
'ನಂದಗೋಕುಲ'ವೊಂದು ಬಾಗಿಲು ತೆರೆದಿದೆ. ಈಗಾಗಲೇ 'ಚಿತ್ರದುರ್ಗ'ದಂತ ಸುಂದರ, ಚಟುವಟಿಕೆಯ ಬ್ಲಾಗಿನ ಒಡತಿಯಾಗಿದ್ದ ನನ್ನ ಪ್ರೀತಿಯ ಗೆಳತಿ, ಈಗ ಪುಟಾಣಿ ಅಮರ್ತ್ಯನನ್ನ ಕಂಕುಳಲ್ಲಿ ಎತ್ತಿಕೊಂಡೆ ಅವನಿಗೆ ಒಂದು ಬ್ಲಾಗ್ ಮಾಡಿದ್ದಾಳೆ. ಅವಳ ಕಣಜದಲ್ಲಿರೋ ನೂರಾರು ಕನ್ನಡ, ಇಂಗ್ಲಿಷ್ ಸರಕುಗಳು ನಂದಗೋಕುಲದ ಮೂಲಕ ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲರಿಗೂ ಸಿಗುವಂತಾಗಲಿ ಮತ್ತು ಹಾಗಾಗಲು ಈ ನಂದಗೋಕುಲದ ಕೃಷ್ಣ ಅವನ ಅಮ್ಮನಿಗೆ ಸಾಕಷ್ಟು ಸಮಯ, ಸ್ಪೂರ್ತಿ ಕರುಣಿಸಲಿ ಅಂತ ಪ್ರೀತಿಯಿಂದ ಹಾರೈಸುತ್ತಾ......

ಅಂದ ಹಾಗೆ ಮಕ್ಕಳಿಗೆ ಕನ್ನಡವನ್ನೇ ಆಗಲಿ, ಇನ್ನೇನನ್ನೇ ಆಗಲಿ ಕಲಿಯೋ ಆಸಕ್ತಿ ಬರಿಸೋದು ಹ್ಯಾಗೆ? ನಾನು ಮಾಡಿದ್ದು ಹೀಗೆ: ನಿಶು ಸಣ್ಣ ಮಗುವಿದ್ದಾಗಿನಿಂದ ಅವನಿಗಂತ ಹಾಡುತ್ತಿದ್ದ ಹಾಡುಗಳಲ್ಲಿ English, ಕನ್ನಡ ವರ್ಣಮಾಲೆಯನ್ನೂ ಸೇರಿಸಿಕೊಳ್ತಿದ್ದೆ. ಇದ್ದಕ್ಕಿದ್ದಂತೆ ಒಂದು ದಿನ ತಾನಾಗೆ ನನ್ನ ಜೊತೆ ಹಾಡಲಿಕ್ಕೆ ಶುರು ಮಾಡಿದ ನಿಶು, ೧೩-೧೪ ತಿಂಗಳ ಮಗುವಿರುವಾಗಲೇ ಎಲ್ಲಾ English-ಕನ್ನಡ ಅಕ್ಷರಗಳನ್ನೂ ಹಾಡುತ್ತಿದ್ದ. Of-course, ಈಗಲೂ 'ರ' ಹೊರಳದ ಅವನ ನಾಲಿಗೆಯಲ್ಲಿ ಯರಲವ, ಯಲಲವ ಆಗೇ ನಲಿಯೋದು. ಕೆಲವೊಮ್ಮೆ ಅದು ಯಲವಲ-ವೂ ಆಗಿ, ಹಾಗೆ ಆದಾಗಲೆಲ್ಲ 'ಅಯ್ಯೊ ಈ ಕನ್ನಡ ಅಕ್ಷರ ಮಾಲೆ ಎಷ್ಟು ಮುದ್ದಾಗಿದೆಯಲ್ಲ' ಅನ್ನಿಸಿ, ನಿಶುವಿನ ಮೇಲೂ, ಕನ್ನಡದ ಮೇಲೂ ಒಟ್ಟೊಟ್ಟಿಗೇ ಮುದ್ದು ಉಕ್ಕಿ ಬರುವುದೂ ಉಂಟು.



ನೀವು ನಂಬ್ತೀರೋ ಇಲ್ವೋ ಗೊತ್ತಿಲ್ಲ, ನಿಶೂಗೆ ಕನ್ನಡ ಕಾಗುಣಿತ ಯಾರೂ ಹೇಳಿ ಕೊಟ್ಟಿದ್ದಲ್ಲ. ಒಂದೇ ಒಂದು ಬಾರಿ ನಾನು 'ಕ' ಅಕ್ಷರದ ಕಾಗುಣಿತ 'ಹಾಡಿ' ತೊರಿಸಿದ್ದು. ಅದಕ್ಕೂ ಅ ಆ ಇ ಈ ಸ್ವರಗಳಿಗೂ ಇರುವ ಸಾಮ್ಯ ಗುರುತಿಸಿ ಬೇರೆಲ್ಲ ವ್ಯಂಜನಾಕ್ಷರಗಳಿಗೂ ಅದನ್ನ apply ಮಾಡಿದ್ದು ಈ ಚಿಲ್ಟೂನೇ, ಅದೂ ೨ ವರ್ಷ ತುಂಬುವ ಮುಂಚೆಯೇ! ಮಕ್ಕಳ beautiful, unbelievable mind ಬಗ್ಗೆ ನಿಮಗೆ ಗೊತ್ತಿದ್ದರೆ, ನೀವಿದನ್ನ ನಂಬ್ತೀರ..ನನಗೆ ಗೊತ್ತು.

Thursday, July 05, 2007

ಮಳೆ ಹಾಡುಗಳು

ಮಳೆ ಬಂತು ಮಳೆ, ಕೊಡೆ ಹಿಡಿದು ನಡೆ
ಜಾರಿ ಬಿದ್ದು ಆಯಿತು ಬಟ್ಟೆಯೆಲ್ಲ ಕೊಳೆ!

'ಮಳೆ ಬಂತು ಮಳೆ' ಹಾಡನ್ನ ನಾನು ಕಲಿತಿದ್ದು ಶಿಶುವಿಹಾರದಲ್ಲಿದ್ದಾಗ. ಈಗ ಹೀಗೆ ಮನೆಯಿಂದ, ಆಚೆ ಸುರಿಯೋ ಮಳೆ ನೋಡ್ತಾ ನಿಶು ಜೊತೆಗೆ ಈ ಹಾಡು ಹೇಳೋವಾಗ ಆಗ ಹಾಡಿದ್ದಾಗ ಆದಷ್ಟೇ ಖುಷಿ ಆಗ್ತಿದೆ.


7ನೇ ಕ್ಲಾಸ್ ತನಕ ಕನ್ನಡ ಮೀಡಿಯಂನಲ್ಲೇ ಓದುವ ಪುಣ್ಯ ನನಗಿತ್ತು. ಹೀಗಾಗಿ Englishಶುರುವಾಗಿದ್ದು 5ನೇ ಕ್ಲಾಸ್ನಿಂದ. A B C D, Apple, Banana.. ಜೊತೆಗೇ ಸ್ವಂತ ಆಸಕ್ತಿಯಿಂದ, ಮಕ್ಕಳಿಗೆ ಖುಷಿಯಾಗಲಿ ಅಂತ ದಾಸಪ್ಪ ಮೇಷ್ಟ್ರು ನಮಗೆಲ್ಲ ಒಂದಷ್ಟು rhymes ಹೇಳಿಕೊಟ್ಟಿದ್ರು. ಹಾಡನ್ನು ಅವರು ಅಭಿನಯಿಸಿ, ಚಿತ್ರ ತೋರಿಸಿ ಪ್ರೀತಿಯಿಂದ ಕಲಿಸುತ್ತಿದ್ದ ಬಗೆ ನನಗೆ ನೆನ್ನೆ ಕಂಡಷ್ಟೇ ಚೆನ್ನಾಗಿ ನೆನಪಿದೆ. ಅವರು ಕಲಿಸಿದ್ದ Rain, rain go away ಹಾಡಿನಿಂದಲೇ, ನನಗೆ English ಮೇಲೆ ಪ್ರೀತಿ ಹುಟ್ಟಿದ್ದು ಅಂತ ಕಾಣತ್ತೆ.

Rain, rain go away

Come again another day

Little johnny wants to play

Rain, rain go away.

ಕನ್ನಡದಲ್ಲಿ ಹೀಗೆ ಭಾವಾನುವಾದ ಮಾಡಿದ್ರೆ...

'ಬಾರೊ ಬಾರೊ ಮಳೆರಾಯ,

ಬಾರೊ ನಮ್ಮನೆ ತೋಟಕ್ಕೆ

ಈವತ್ತ್ ಬೇಡ ನಾಳೇಗ್ಬಾರೋ

ಈಗ್ ನಾನ್ ಹೋಗ್ಬೇಕ್ ಆಟಕ್ಕೆ.'

ಈಗ ಇಲ್ಲಿ ನಿಶು, ಕನ್ನಡ ಇಂಗ್ಲಿಷ್ ಎಲ್ಲ ಬೆರೆಸುತ್ತ, ಎರಡರಲ್ಲೂ ಒಟ್ಟೊಟ್ಟಿಗೆ ಮಾತನಾಡುತ್ತಾ ನಲಿಯುತ್ತಿದ್ದರೆ, ಈ ಮಗುವಿಗೆ ಇಂಗ್ಲಿಷ್ ಮಳೆಯ ಸೊಬಗು, ಕನ್ನಡ ಮಣ್ಣಿನ ಕಂಪು ಎರಡನ್ನೂ ಅನುಭವಿಸಲು ಸಾಧ್ಯವಾದೀತ, ಇನ್ನೂ ಯಾವ್ಯಾವ ಭಾಷೆಗಳ ಮಳೆಯಲ್ಲಿ ನೆನೆಯೋ ಸುಖ ಇವನಿಗೆ ಸಿಗಬಹುದು ಅಂತ ಅಂದುಕೊಳ್ಳುತ್ತಿದ್ದೇನೆ, ಹಾಗೇ ಸುಮ್ಮನೆ.



ಚಿತ್ರಗಳು: ಮೀರ







Monday, June 11, 2007

Humpty Dumpty ಮೊಟ್ಟೆರಾಯ

Humpty Dumpty sat on a wall
Humpty Dumpty had a great fall
All the king's horses and all the king's men
Couldn't put Humpty Dumpty together again.
This is one of Nishu's favaourite rhymes. Here is an attempt to translate it to Kannada.





ನಿಶು ಈ ಹಾಡು ಹೇಳೋದು ಹೀಗೆ.....


ಚಿತ್ರಗಳು: ಮೀರ

Thursday, May 31, 2007

ಇಲ್ಲಿಯವರೆಗೆ...........




ಇಷ್ಟು ಬೇಗ ನಿಶೂಗೆ ಎರಡು ವರ್ಷ ಆಗಿಬಿಡ್ತಾ ಅಂತ ತುಂಬಾ ಜನ ಕೇಳ್ತಿದ್ದಾರೆ. ಈಗ ಒಮ್ಮೆ ಹಿಂತಿರುಗಿ ನೋಡಿದರೆ ನನಗೂ ಹಾಗೆ ಅನ್ನಿಸುತ್ತಿರೋದಾದ್ರೂ, ಇಲ್ಲಿಯವರೆಗಿನ ಈ ಕಾಲ ಓಡಿದ್ದೂ ಇಲ್ಲ, ತೆವಳಿದ್ದೂ ಇಲ್ಲ - ಸರಿಯಾದ ಗತಿಯಲ್ಲೇ ಸಾಗುತ್ತಿತ್ತು. ನಿಶುವಿನ ಮೂಲಕ ನನ್ನ ಸುತ್ತಲಿನ ಎಲ್ಲವನ್ನೂ ಮತ್ತೆ ಹೊಸ ಕಣ್ಣುಗಳಿಂದ ನೋಡೋ ಅವಕಾಶ ನನಗೆ ಸಿಕ್ಕಿರೋದು, parenting-ನಿಂದ ನನಗೊದಗಿದ ಸಂತೋಷಗಳಲ್ಲಿ ಒಂದು. ಮೇ ೨೦೦೫ರಿಂದ(ಅದಕ್ಕೂ ೯ ತಿಂಗಳ ಮುಂಚಿನಿಂದ) ಇಲ್ಲಿಯವರೆಗಿನ ನನ್ನ, ನಿಶುವಿನ ಒಡನಾಟ ನನ್ನಲ್ಲಿ ಪ್ರತಿದಿನ ಹೊಸ ಅರಿವು, ಅಚ್ಚರಿ, ಉಲ್ಲಾಸಗಳನ್ನ ತುಂಬಿ, ನಾಳೆ ಬರಬಹುದಾದ ಹೊಸ ವಿಸ್ಮಯಗಳಿಗಾಗಿ ಕಾಯೋ ಹಾಗೆ ಮಾಡಿದೆ. ಅಮ್ಮನಾಗಿದ್ದಕ್ಕೆ ಬಂದಿರೋ ಎಲ್ಲಾ ಹೊಸ ಜವಾಬ್ದಾರಿಗಳು, ಹೊಸ ಸವಾಲುಗಳು ಕೂಡ ನನ್ನಲ್ಲಿ ಸಹನೆ, ಸ್ಪೂರ್ತಿ ಹೆಚ್ಚೋ ಹಾಗೇ ಮಾಡ್ತಿರೋದಕ್ಕೆ ನನಗೆ ನಾನೆ thanks ಹೇಳಿಕೊಳ್ಳುತ್ತಾ.................




Saturday, May 26, 2007

Wednesday, May 23, 2007

Hello.....it's me again...........did you miss me?

ನವಂಬರ್ ಆದ್ಮೇಲೆ ಸಿಗೋಣ ಅಂತ ಹೇಳಿದ್ನೇ ಹೊರ್ತು ಯಾವಾಗ ಅಂತ ಹೇಳಿರ್ಲಿಲ್ವಲ್ಲ' ಅಂತ ಹೇಳಿ ನುಣಿಚಿಕೋಳ್ಳೋಣ ಅಂದುಕೊಳ್ತಿದ್ದೆ. ಇಷ್ಟು ದಿನ ಬ್ಲಾಗ್ ಮುಂದುವರಿಸದೆ ಇದ್ದಿದ್ದಕ್ಕೆ ಅದೊಂದೆ ಕಾರಣ ಇದ್ದಿದ್ದು. ಈಗ ಮತ್ತೆ ನಿಶು, ನಾನು ಇಬ್ರೂ ಇಲ್ಲಿ ಬಂದಿದೀವಿ. 'ನಿಶು ಮನೆ ಬಾಗಿಲು ಯಾವಾಗ ತೆಗಿತೀಯ' ಅಂತ ಕೇಳ್ತಾ ಬಾಗಿಲು ಮತ್ತೆ ತೆರೆಯೋ ಹಾಗೆ ಮಾಡಿದ ಎಲ್ರಿಗೂ ತುಂಬಾ ತುಂಬಾ ಥ್ಯಾಂಕ್ಸ್. ಹೀಗೇ ಬರ್ತಾ ಇರಿ.

ಮ. ಮಾ.(!): ನಾಳೆ(May 26th) ನಿಶೂಗೆ ಎರಡು ವರ್ಷ ತುಂಬತ್ತೆ.