Monday, January 28, 2008

ನಮ್ಮನೆ ಪುಟ್ಟಣ್ಣ

ನಿಶುಮರಿ


ಅಮ್ಮ ಅಂದ್ರೆ ತುಂಬಾ ಇಷ್ಟ


ಅಮ್ಮನ ಕೆನ್ನೇಗ್ ಮುತ್ತು


ಕೊಟ್ಟು, ಕೂಡ್ಲೇ ಕೇಳುತ್ತಾನೆ,


'ಕೊಡ್ತೀಯಾ ಬಿಸ್ಕತ್ತು?'



ಅಪ್ಪನ ಕಂಡ್ರೂ ತುಂಬಾ ಪ್ರೀತಿ


ಅಪ್ಪಾನೇ ಬೆಸ್ಟ್ ಫ್ರೆಂಡು,


ಮನೆಯೊಳಗೇನೇ ಆಡ್ತಿರ್ತಾರೆ

ಇಬ್ರೂನೂ ಕಾಲ್ಚೆಂಡು!




ನನ್ನ ಚಿನ್ನ ನನ್ನ ರನ್ನ
ದಿನವೂ ಒಂದೊಂದ್ ಬಣ್ಣ
ಹಚ್ಕೊಂಡ್ ಬರ್ತಾನ್ ಅಂಗೀಗೆಲ್ಲಾ
ಡೇಕೇರಿಂದ ಚಿಣ್ಣ.


ಬೇಕೇಬೇಕು ಕೇಳಿದ್ದೆಲ್ಲಾ
ಕೊಡ್ದೆ ಇದ್ರೆ ಟೂ..ಟೂ ..
ಹುಬ್ಬು ಕೊಂಕಿಸಿ, ಕೆನ್ನೆ ಉಬ್ಬಿಸಿ
ಮೂಲೇಲ್ ನಿಲ್ತಾನ್ ಛೋಟೂ.



ಯಾಕೆ?, ಏನು?, ಹ್ಯಾಗೆ?, ಎಲ್ಲಿ?
ಎಷ್ಟೊಂದಿದೆ ಪ್ರಶ್ನೆಗಳು!
ತ್ರ ಹೇಳೀ ಹೇಳೀ
ನಂತಲೆಯಾಯ್ತು ಸಾವಿರ ಹೋಳುಗಳು.



Friday, January 04, 2008

ಕಾ ಕಾ ಕಾಗೆ

ನೀರು ಮೇಲೆ ಬರಲಿಕ್ಕೆ ಹೂಜಿ ತುಂಬಾ ಕಲ್ಲು ತಂದು ಹಾಕಿದ ಜಾಣ ಕಾಗೆಯ ಹಾಗೇ ನರಿ ಹೊಗಳಿದ್ದಕ್ಕೆ ಬಾಯಿಬಿಟ್ಟು, ಕಜ್ಜಾಯ ಕಳೆದುಕೊಂಡ ಕಾಗೆಯೂ ನನಗಿಷ್ಟ. ಹಾಗೆ ಕಾಗೆ ಇಷ್ಟವಾಗಲಿಕ್ಕೆ ಕಾರಣ, ಚಿಕ್ಕವಳಿದ್ದಾಗ ನಾನು ಓದಿದ ರಾಜರತ್ನಂರ ಕಾಗೆಯ ಕುರಿತ ಪದ್ಯ ಮತ್ತು ನಂತರದ ದಿನಗಳಲ್ಲಿ ಮೆಚ್ಚಿಕೊಂಡ ಆರ್. ಕೆ. ಲಕ್ಷ್ಮಣರ ಕ್ಯಾರಿಕೇಚರ್ ಕಾಗೆ. ಈಗ ಹತ್ತು ವರ್ಷಗಳ ಕೆಳಗೆ ಪನ್ನೇರಳೆ ಹಣ್ಣಿಗಾಗಿ ಮರ ಹತ್ತಿ, ಅದೇ ಮರದಲ್ಲಿ ಗೂಡು ಕಟ್ಟಿದ್ದ ಕಾಗೆಯೊಂದರ ಕೈಲಿ(ಕೊಕ್ಕಲ್ಲಿ!) ಬೆರಳಿಗೆ ಕುಟುಕಿಸಿಕೊಂಡು ಗಾಯ ಮಾಡಿಕೊಂಡಿದ್ದು ನೆನಪಾಗ್ತಿದೆ. ಆ ಕಾಗೆಯಂತೂ ಲಕ್ಷ್ಮಣರ ಕಾಗೆಗಿಂತ ಹೆಚ್ಚಿನ ಪರ್ಸನಾಲಿಟಿ ಹೊಂದಿತ್ತು ಅನ್ನಿಸ್ತಿದೆ.




ರಾಜರತ್ನಂ ಪದ್ಯ ಇಲ್ಲಿದೆ:







ಕರ್ರಗಿರುವ ಕಾಗೆಯೊಂದು,

ಭರ್ರ್ ಎಂದು ಹಾರಿ ಬಂದು,

ಸರ್ರ್ ಎಂದು ಸುತ್ತಿ ತಿರುಗಿ

ಕೆಳಗೆ ನೋಡಿತು.


ಸರ್ರ್ ಎಂದು ಸುತ್ತಿ ತಿರುಗಿ,

ಜರ್ರ್ ಎಂದು ಜಾರುವಾಗ,

ಪರ್ರ್ ಎಂದು ಅದರ ರೆಕ್ಕೆ

ಹರಿದು ಹೋಯಿತು.



ದ್ವಿತೀಯಾಕ್ಷರ ಪ್ರಾಸದ ಈ ಪದ್ಯ ನನಗೂ, ನಿಶೂಗೂ ಅಚ್ಚುಮೆಚ್ಚು. `ಕಂದನ ಕಾವ್ಯ' ಅನ್ನೋ ಹೆಸರಿನ ಪುಸ್ತಕದಲ್ಲಿರೋ ಈ ಪದ್ಯವನ್ನ ನನಗೆ ನೆನಪಲ್ಲಿ ಇರುವ ಹಾಗೆ ಬರೆದಿದ್ದೀನಿ. ಇದರ ಸರಿಯಾದ ಪಾಠ ಯಾರಿಗಾದರೂ ಗೊತ್ತಿದ್ದಲ್ಲಿ ಕಳುಹಿಸಿಕೊಡಿ.

*****

ಈ ಕಾಗೆ ಪದ್ಯ ನನಗೆ ನೆನಪಾಗಲಿಕ್ಕೆ ಕಾರಣರಾದವರು, ನಿಶುಮನೆಗೆಂದು ತಮಗೆ ಸಿಕ್ಕ ಪದ್ಯವೊಂದನ್ನ ನನಗೆ ಕಳುಹಿಸಿಕೊಟ್ಟ ಶೀಲಾ. ಅವರಿಗೆ ಧನ್ಯವಾದ. `ಕ' ಅಕ್ಷರದ ಕಾಗುಣಿತವನ್ನ ಆಧರಿಸಿ ಬರೆದಿರುವ ಈ ಪದ್ಯದ ಕಡೆಯ ಸಾಲಿನ ಅರ್ಥ ನನಗೆ ತಿಳಿಯಲಿಲ್ಲ. 'ಕಃಫಿಕ' ಎಂದರೆ ಏನೆಂದು ನನಗೆ ಗೊತ್ತಿಲ್ಲ. ಕಡೆಯ ಸಾಲಿನಲ್ಲಿ 'ಕಃ' ಬರಬೇಕೆಂಬ ಕಾರಣಕ್ಕೆ ಹಾಗೆ ಬರೆದಿದ್ದಾರ? ನಿಮಗ್ಯಾರಿಗಾದರೂ ಗೊತ್ತಿದ್ದರೆ ತಿಳಿಸಿಕೊಡಿ

****

ಶೀಲಾ ಅವರು ನನಗೆ ಬರೆದದ್ದು ಇಲ್ಲಿದೆ:


ಮೀರಾ, ಇದು ನನಗ "ಸುಧಾ" ಪತ್ರಿಕೆಯಲ್ಲಿ ಸಿಕ್ಕಿತು. ಓದಿದ ಕೂಡಲೆ ನಿಮ್ಮ ನೆನಪಾಯಿತು. ಇಲ್ಲಿ ಅಂಟಿಸಿದ್ದೇನೆ. ಆಕರ್ಷಕವಾಗಿ ಮಾಡಿ ನಿಮ್ಮ ಬ್ಲಾಗಿನಲ್ಲಿ ಹಾಕುವುದಾದರೆ ಹಾಕಿ.





ಕ, ಕಾ....ಬಳ್ಳಿ
ಕಪ್ಪಿನ ಬಣ್ಣದ ಹಕ್ಕಿಯು ಅಹ!ಹಾ!
ಕಾ ಕಾ ಎನ್ನುತ ಹಾರುತಿದೆ.

ಕಿಟ್ಟನ ಮನೆಯ ಅಂಗಳದಲ್ಲಿಹ ಕೀಟಗಳನದು ತಿನ್ನುತಿದೆ.
ಕುಲವೇ ಕಲಿತಹ ಹಿರಿಗುಣವೊಂದಿದೆ
ಕೂಟವ ಕಟ್ಟುವ ಓ ಬುದ್ಧಿ.
ಕೆಲಸದಿ ಶ್ರದ್ಧಾಭಕ್ತಿಯು ತುಂಬಿದೆ ಕೇಳಿರಿ ನಿಮಗಿದು ಸದ್ಬುದ್ಧಿ.
ಕೈಗದು ಬಾರದು ದಾಸ್ಯವನೊಪ್ಪದು
ಕೊಟ್ಟೇ ತಿಂಬುದ ಯೋಚಿಸಿರಿ.
ಕೋಗಿಲೆಯಂಥಾ ಮೈ ಬಣ್ಣದ ಅದು
ಕೌ ಎನ್ನಲು ಕಲ್ಲೆಸಯದಿರಿ
ಕಂಠವು ಕರ್ಕಶವಾದರೂ ಕಾಗೆಯು
ಕಃಫಿಕವಲ್ಲೈ ಹಳೆಯದಿರಿ.


ಎಲ್. ಎಸ್. ಹೆಗಡೆಯವರು ಅವರ ಶಿಕ್ಷಕರು ೪೫ ವರ್ಷಗಳ ಹಿಂದೆ ಹೇಳಿಕೊಟ್ಟದ್ದನ್ನು ಸುಧಾ ಪತ್ರಿಕೆಗೆ ಕಳುಹಿಸಿಕೊಟ್ಟಿದ್ದಾರೆ.

- ಶೀಲಾ.

ಕಾಗೆ ಹಾಡು ಇಲ್ಲಿದೆ!

ಹೊಸವರ್ಷಕ್ಕೆ ಶುಭ ಹಾರೈಸುವ ಮೊದಲೇ ಡ್ರಾಫ್ಟ್ ಮಾಡಿದ್ದ 'ಕಾ ಕಾ ಕಾಗೆ' ಹೆಸರಿನ ನನ್ನ ಪೋಸ್ಟ್, ಏನು ಮಾಡಿದರೂ recent post ಅಂತ ಎಲ್ಲಕ್ಕಿಂತ ಮೇಲೆ ಹಾಕಲು ಆಗ್ತಿಲ್ಲ. ಹೊಸವರ್ಷದ ಪುಟ ಸ್ಕ್ರಾಲ್ ಮಾಡುತ್ತ ಕೆಳಗಿಳಿದರೆ, ನೀವಿದನ್ನ ನೋಡಬಹುದು. ನೋಡಿ, ಕಾಮೆಂಟಿಸಿ.


ಈ ಸಮಸ್ಯೆಗೆ ಚೇತನ್ ಪರಿಹಾರ ಸೂಚಿಸಿ, ಇದು 'ರೀಸೆಂಟ್ ಪೋಸ್ಟ್' ಆಗುವ ಹಾಗೆ ಮಾಡಿದ್ದಾರೆ. ಕಾಗೆ ಬುದ್ಧಿವಂತಿಕೆಯಿಂದ ಹೂಜಿಯಲ್ಲಿ ನೀರು ಮೇಲೆ ಬಂದ ಹಾಗೇ ಈ ಬರಹವೂ ಮೇಲೆ ಬಂದಿದೆ. ಚೇತನ್-ಗೆ ಥ್ಯಾಂಕ್ಸ್ ಹೇಳುತ್ತಾ, ಕೆಲವಂ ಬಲ್ಲವರಿಂದ ಕಲಿಯುವ ಖುಶಿ ಅನುಭವಿಸುತ್ತಾ......

Tuesday, January 01, 2008

HAPPY NEW YEAR

ಎಲ್ಲರಿಗೂ ಹೊಸವರ್ಷದ ಶುಭಾಶಯಗಳು


ಹೊಸವರ್ಷ ಹ್ಯಾಗೆ ಬರತ್ತೆ? ಆನೆ ಹತ್ತಿ ಬರತ್ತಾ?..ಅಂತ ನಿಶು ಕೇಳ್ತಿದ್ದಾನೆ. ನಾನು, ಇವನು ಇಬ್ರೂ 'ಹೌದು' ಅಂತ ಹೇಳಿದ್ದೇವೆ.