ನೀರು ಮೇಲೆ ಬರಲಿಕ್ಕೆ ಹೂಜಿ ತುಂಬಾ ಕಲ್ಲು ತಂದು ಹಾಕಿದ ಜಾಣ ಕಾಗೆಯ ಹಾಗೇ ನರಿ ಹೊಗಳಿದ್ದಕ್ಕೆ ಬಾಯಿಬಿಟ್ಟು, ಕಜ್ಜಾಯ ಕಳೆದುಕೊಂಡ ಕಾಗೆಯೂ ನನಗಿಷ್ಟ. ಹಾಗೆ ಕಾಗೆ ಇಷ್ಟವಾಗಲಿಕ್ಕೆ ಕಾರಣ, ಚಿಕ್ಕವಳಿದ್ದಾಗ ನಾನು ಓದಿದ ರಾಜರತ್ನಂರ ಕಾಗೆಯ ಕುರಿತ ಪದ್ಯ ಮತ್ತು ನಂತರದ ದಿನಗಳಲ್ಲಿ ಮೆಚ್ಚಿಕೊಂಡ ಆರ್. ಕೆ. ಲಕ್ಷ್ಮಣರ ಕ್ಯಾರಿಕೇಚರ್ ಕಾಗೆ. ಈಗ ಹತ್ತು ವರ್ಷಗಳ ಕೆಳಗೆ ಪನ್ನೇರಳೆ ಹಣ್ಣಿಗಾಗಿ ಮರ ಹತ್ತಿ, ಅದೇ ಮರದಲ್ಲಿ ಗೂಡು ಕಟ್ಟಿದ್ದ ಕಾಗೆಯೊಂದರ ಕೈಲಿ(ಕೊಕ್ಕಲ್ಲಿ!) ಬೆರಳಿಗೆ ಕುಟುಕಿಸಿಕೊಂಡು ಗಾಯ ಮಾಡಿಕೊಂಡಿದ್ದು ನೆನಪಾಗ್ತಿದೆ. ಆ ಕಾಗೆಯಂತೂ ಲಕ್ಷ್ಮಣರ ಕಾಗೆಗಿಂತ ಹೆಚ್ಚಿನ ಪರ್ಸನಾಲಿಟಿ ಹೊಂದಿತ್ತು ಅನ್ನಿಸ್ತಿದೆ.
ರಾಜರತ್ನಂ ಪದ್ಯ ಇಲ್ಲಿದೆ:
ಕರ್ರಗಿರುವ ಕಾಗೆಯೊಂದು,
ಭರ್ರ್ ಎಂದು ಹಾರಿ ಬಂದು,
ಸರ್ರ್ ಎಂದು ಸುತ್ತಿ ತಿರುಗಿ
ಕೆಳಗೆ ನೋಡಿತು.
ಸರ್ರ್ ಎಂದು ಸುತ್ತಿ ತಿರುಗಿ,
ಜರ್ರ್ ಎಂದು ಜಾರುವಾಗ,
ಪರ್ರ್ ಎಂದು ಅದರ ರೆಕ್ಕೆ
ಹರಿದು ಹೋಯಿತು.
ದ್ವಿತೀಯಾಕ್ಷರ ಪ್ರಾಸದ ಈ ಪದ್ಯ ನನಗೂ, ನಿಶೂಗೂ ಅಚ್ಚುಮೆಚ್ಚು. `ಕಂದನ ಕಾವ್ಯ' ಅನ್ನೋ ಹೆಸರಿನ ಪುಸ್ತಕದಲ್ಲಿರೋ ಈ ಪದ್ಯವನ್ನ ನನಗೆ ನೆನಪಲ್ಲಿ ಇರುವ ಹಾಗೆ ಬರೆದಿದ್ದೀನಿ. ಇದರ ಸರಿಯಾದ ಪಾಠ ಯಾರಿಗಾದರೂ ಗೊತ್ತಿದ್ದಲ್ಲಿ ಕಳುಹಿಸಿಕೊಡಿ.
*****
ಈ ಕಾಗೆ ಪದ್ಯ ನನಗೆ ನೆನಪಾಗಲಿಕ್ಕೆ ಕಾರಣರಾದವರು, ನಿಶುಮನೆಗೆಂದು ತಮಗೆ ಸಿಕ್ಕ ಪದ್ಯವೊಂದನ್ನ ನನಗೆ ಕಳುಹಿಸಿಕೊಟ್ಟ ಶೀಲಾ. ಅವರಿಗೆ ಧನ್ಯವಾದ. `ಕ' ಅಕ್ಷರದ ಕಾಗುಣಿತವನ್ನ ಆಧರಿಸಿ ಬರೆದಿರುವ ಈ ಪದ್ಯದ ಕಡೆಯ ಸಾಲಿನ ಅರ್ಥ ನನಗೆ ತಿಳಿಯಲಿಲ್ಲ. 'ಕಃಫಿಕ' ಎಂದರೆ ಏನೆಂದು ನನಗೆ ಗೊತ್ತಿಲ್ಲ. ಕಡೆಯ ಸಾಲಿನಲ್ಲಿ 'ಕಃ' ಬರಬೇಕೆಂಬ ಕಾರಣಕ್ಕೆ ಹಾಗೆ ಬರೆದಿದ್ದಾರ? ನಿಮಗ್ಯಾರಿಗಾದರೂ ಗೊತ್ತಿದ್ದರೆ ತಿಳಿಸಿಕೊಡಿ
****
ಶೀಲಾ ಅವರು ನನಗೆ ಬರೆದದ್ದು ಇಲ್ಲಿದೆ:
ಮೀರಾ, ಇದು ನನಗ "ಸುಧಾ" ಪತ್ರಿಕೆಯಲ್ಲಿ ಸಿಕ್ಕಿತು. ಓದಿದ ಕೂಡಲೆ ನಿಮ್ಮ ನೆನಪಾಯಿತು. ಇಲ್ಲಿ ಅಂಟಿಸಿದ್ದೇನೆ. ಆಕರ್ಷಕವಾಗಿ ಮಾಡಿ ನಿಮ್ಮ ಬ್ಲಾಗಿನಲ್ಲಿ ಹಾಕುವುದಾದರೆ ಹಾಕಿ.

ಕಾ ಕಾ ಎನ್ನುತ ಹಾರುತಿದೆ.
ಕಿಟ್ಟನ ಮನೆಯ ಅಂಗಳದಲ್ಲಿಹ ಕೀಟಗಳನದು ತಿನ್ನುತಿದೆ.
ಎಲ್. ಎಸ್. ಹೆಗಡೆಯವರು ಅವರ ಶಿಕ್ಷಕರು ೪೫ ವರ್ಷಗಳ ಹಿಂದೆ ಹೇಳಿಕೊಟ್ಟದ್ದನ್ನು ಸುಧಾ ಪತ್ರಿಕೆಗೆ ಕಳುಹಿಸಿಕೊಟ್ಟಿದ್ದಾರೆ.
- ಶೀಲಾ.
8 comments:
rekke ellide?! hahaha
ಮೀರಾ,
ಕಾ ಗುಣಿತದ ಪದ್ಯವನ್ನು ಹಾಕಿದಕ್ಕೆ ಧನ್ಯವಾದ. ನಿಮ್ಮ ನಿಶು ಹೊಸ ವರ್ಷವನ್ನು ಆನೆಯ ಮೇಲೆ ಕೂತು ಸ್ವಾಗತಿದ್ದಾನೆ. ನೋಡಿ ತುಂಬಾ ಸಂತೋಷವಾಯಿತು. ಹಾಗೆಯೇ ಅವನು ತೊದಲು ನುಡಿಯಲ್ಲಿ ಹಾಡಿದ ರಾಜರತ್ನಂ ಪದ್ಯವನ್ನು ಕೇಳಿ ಧನ್ಯಳಾದೆ. ಬಹುಶಃ ಕನ್ನಡಾಂಬೆಯೂ! ಅಂತೇಯೇ ಅವನ ಕುತೂಹಲದ ಪ್ರಶ್ನೆಗಳನ್ನು ಕೇಳಿ ನನ್ನ ಮಕ್ಕಳೂ ತುಂಬಾ ಚಕಿತರಾದರು. (ನಿಶುನ ಕನ್ನಡ ಕೇಳಿ.... )
:-) ಕಾಗೆಗೂ ಒಂದು ಕಾಲ........
ಮೀರಾ, ಕ-ಕಾ ಪದ್ಯದ ಕೊನೆಯ ಸಾಲು:
ಕಃಪಿಕವಲ್ಲೈ ಅಂತಿದೆಯಲ್ಲ...
ಸಂಸ್ಕೃತದಲ್ಲಿ ಕಃ ಅಂದ್ರೆ ಕಶ್ಚಿತ್ ಅನ್ನುವ ಅರ್ಥ, ಪಿಕ ಅಂದ್ರೆ ಕೋಗಿಲೆ. ಒಟ್ಟುಗೂಡಿಸಿದರೆ, "ಕಾಗೆ ಸುಮ್ಮನೆ ಹಾಡುವ ಕೋಗಿಲೆಯ ಹಾಗಲ್ಲ, ಉಪಕಾರಿ ಹಕ್ಕಿ, ಹಳಿಯದಿರಿ" ಅಂತಲೆ? ನನ್ನ ಊಹೆ ಮಾತ್ರ.
ತುಂಬ ಮುದ್ದಾಗಿದೆ ವಿಡಿಯೋ
ನನಗೂ ಚಿಕ್ಕವಳಿದ್ದಾಗ ರ್‍ಅ ಉಚ್ಚಾರ ಸರಿ ಬರ್ತಿರ್ಲಿಲ್ಲ..
'ರೆಕ್ಕೆ ಎಲ್ಲಿದೆ' ಅಂತೆ..? ಸಕ್ಕತ್ smartನಿಮ್ಮ ನಿಶು.. :-)
ನಿಮ್ಮ ಮಗುವಿನಷ್ಟೇ ಮುದ್ದು ಮುದ್ದಾಗಿದೆ ಬ್ಲಾಗ್. ಒಂದೇ ದಿನದಲ್ಲಿ ಎಲ್ಲವನ್ನೂ ಓದಿಮುಗಿಸಿದ್ದೇನೆ. ಆದಷ್ಟುಬೇಗ ನನ್ನ ಬ್ಲಾಗ್ ನಲ್ಲಿ ನಿಮ್ಮ ಲಿಂಕ್ ಹಾಕುವೆನು. ನೀವು ಹೇಳಿದಂತೆ ಯಾರೂ ಮಕ್ಕಳ ಬಗೆಗಿನ ಬ್ಲಾಗ್ ಮಾಡಿದ್ದು, ಅದರಲ್ಲೂ ಇಷ್ಟೊಂದು ಮುದ್ದು ಮುದ್ದಾಗಿರುವ ಬರಹಗಳನ್ನು, ನಮ್ಮ ಬಾಲ್ಯವನ್ನು ನೆನಪಿಸುವಂತಹ ಬರಹವನ್ನು ಬರೆದಿದ್ದು ನಾನು ಕಂಡಿಲ್ಲ.... ನಿಮ್ಮ ಕಾರ್ಯವನ್ನು ಪ್ರಶಂಸಿಸಲೇಬೇಕು.
ನಿಮ್ಮ ಮಗುವಿನಂತೆಯೇ ನಿಮ್ಮ ಬ್ಲಾಗ್ ಬರಹವೂ ಮುದ್ದು ಮುದ್ದಾಗಿದೆ. ಆದಷ್ಟು ಬೇಗ ನಿಶು ಮನೆ ಲಿಂಕನ್ನು ನನ್ನ ಬ್ಲಾಗಿಗೆ ಹಾಕುವೆನು. ಮಗುವಿನ ಬಗೆಗಿನ ನಿಮ್ಮ ಒಲವು ನಿಮ್ಮ ಪ್ರತೀ ವಾಕ್ಯದಲ್ಲೂ ಎದ್ದು ಕಾಣುತ್ತಿದೆ. ಇದು ಹೀಗೆನೇ ಮುಂದುವರಿಯಲಿ. ಒಂದೇ ದಿನದಲ್ಲಿ ನಿಮ್ಮ ಎಲ್ಲಾ ಬರಹಗಳನ್ನು ಓದಿ ಮುಗಿಸಿದೆ. ಬಾಲ್ಯದ ದಿನಗಳು ಕಣ್ಮುಂದೆ ಬರುವಂತೆ ಮಾಡಿದೀರಾ... ಧನ್ಯವಾದಗಳು.
ಹೆಸರಿಲ್ಲದವರೇ....ಹ, ಹ, ಹ
ಥ್ಯಾಂಕ್ಯೂ ಶೀಲಾ.
ಹೌದು ಅರುಣ್, ಕಾಗೆ, ಗೂಬೆ ಎಲ್ಲಕ್ಕೂ ಒಂದೊಂದು ಕಾಲ.....ಇರಲೇಬೇಕಲ್ಲ.
ಜ್ಯೋತಿ, ತುಂಬಾ ಚೆನ್ನಾಗಿ ಅರ್ಥೈಸಿದ್ದೀರಿ. ನೀವು ಹೇಳಿದ ಹಾಗೇ ಇರಬೇಕು, ಇದರ ಅರ್ಥ. ಧನ್ಯವಾದ.
ಥ್ಯಾಂಕ್ಯೂ ವೀ. ನಿಮ್ಮ ಬ್ಲಾಗ್ನಲ್ಲಿ ನಿಶುಮನೆ ಲಿಂಕ್ ಹಾಕೋದಕ್ಕೆ ಒಂದು ಅಡ್ವಾನ್ಸ್ ಧನ್ಯವಾದ.
ಎಲ್ರೂ ಹೀಗೆ ಬಂದು ಕಾಮೆಂಟಿಸುತ್ತಿರಿ. ಧನ್ಯವಾದಗಳು.
ಭಾವ-ದರ್ಪಣ -ದವರಿಗೆ ಧನ್ಯವಾದ. ಬರ್ತಾ ಇರಿ.
Post a Comment