

ಬರೀ ನಗ್ತಾ ಇರೋ ನಿಶು ಫೋಟೋಗಳ್ನೇ ತೋರಿಸ್ತೀಯ ನಮ್ಗೆ ಅಂತ complaint ಮಾಡೋವ್ರಿಗೆಲ್ಲಾ ತೋರಿಸೋಕ್ಕೆ ಎರಡೇ ಎರಡು ಅಳೋ ಚಿತ್ರಗಳು- ನಿಶೂದು. ಜೊತೆಗೆ ಕನ್ನಡದ ಜಾನಪದ ಕಣಜದಿಂದ ಆಯ್ದ ಮೂರು ಮುತ್ತುಗಳು - ಅಳುವಾಗಲೂ ಮುದ್ದು ಸುರಿಯುವಂತೆ ಮಾಡೊ ಮ್ಯಾಜಿಕ್ ಗೊತ್ತಿರೋ ಎಲ್ಲ ಕಂದಮ್ಮಗಳಿಗೂ........
ಅಳುವ ಕಂದನ ತುಟಿಯು ಹವಳಾದ ಕುಡಿ ಹಂಗೆ
ಕುಡಿ ಹುಬ್ಬು ಬೇವೀನ ಎಸಳ್ಹಂಗೆ ಕಣ್ಣೋಟ
ಶಿವನ ಕೈಯಲುಗು ಹೊಳೆದಂಗೆ........
ಅತ್ತಾರೆ ಅಳಲವ್ವ ಈ ಕೂಸು ನಮಗಿರಲಿ
ಕೆಟ್ಟಾರೆ ಕೆಡಲಿ ಮನೆಗೆಲಸ ಹೊರೆಗೆಲಸ
ಮಕ್ಕಳಿರಲವ್ವ ನಿನ್ನಂಥಾ..........
ಯಾಕಳುವೆ ಎಲೆ ರಂಗ ಬೇಕಾದ್ದು ನಿನಗೇನು
ನಾಕೆಮ್ಮೆ ಕರೆದ ನೊರೆಹಾಲು ಸಕ್ಕರೆ
ನೀ ಕೇಳಿದಾಗೆಲ್ಲ ಕೊಡುವೇನೂ...........
ಈ ಹಾಡುಗಳ ಜೊತೆಗೇ ಅಣ್ಣಾವ್ರು ಕಾಮನ ಬಿಲ್ಲು-ನಲ್ಲಿ ಹಾಡಿದ್ದ ಹಾಡಿನ ಎರಡು ಸಾಲು ನೆನೆಪಿಗೆ ಬರ್ತಿದೆ. ಮರೆತು ಹೋಗೋ ಮುಂಚೆ ನಿಮ್ಮ ಜೊತೆ ಹಂಚಿಕೊಂಡು ಬಿಡ್ತೀನಿ.
`ನಕ್ಕಾಗ ಬೆಳದಿಂಗಳಂತೆ, ನೀನು ಅತ್ತಾಗ ಸಂಗೀತವು'........