Wednesday, August 08, 2007

ಮುದ್ದು ಕನ್ನಡ


ವರ್ಷಗಳ ಹಿಂದೆ ಹೀಗೇ ಸುಮ್ಮನೇ ವೆಬ್-ನಲ್ಲಿ ಸುತ್ತು ಹೊಡೀತ, ಮಕ್ಕಳಿಗೆ ಅಂತ ಕನ್ನಡ ಅಂತರ್ಜಾಲದಲ್ಲಿ ಏನೇನಿದೆ ಅಂತ ಹುಡುಕಿ, ಅಂಥಾದ್ದೇನೂ ಸಿಕ್ಕದೆ ನಿರಾಶೆಯಾಗಿತ್ತು. ಮಕ್ಕಳಿಗೆ ಸಂಬಂಧಿಸಿದ ವೆಬ್-ಸೈಟುಗಳೂ, ಬ್ಲಾಗ್-ಗಳೂ ಕನ್ನಡದಲ್ಲಿ ಇಲ್ಲವೇ ಇಲ್ಲ ಅನ್ನಿಸುವಷ್ಟು ಕಡಿಮೆ ಇರೋದು ಗಮನಕ್ಕೆ ಬಂತು. ಕೆಲವು ಇಂಡಿಯನ್ ಪೇರೆಂಟಿಂಗ್ ಸೈಟ್-ಗಳಲ್ಲಿ ಬೇರೆ ಭಾರತೀಯ ಭಾಷೆಗಳ ಜೊತೆಗೆ ಕನ್ನಡ ಅಕ್ಷರ ಮಾಲೆಯೋ, ಒಂದೆರಡು ಕತೆ-ಕವಿತೆಯೋ ಇರೋದು ಬಿಟ್ಟರೆ ಹೆಚ್ಚಿಗೆ ಆಸಕ್ತಿ ಹುಟ್ಟಿಸುವಂಥಾದ್ದೇನೂ ಕಾಣಲೇ ಇಲ್ಲ. ಇನ್ನೊಮ್ಮೆ ಈ ಅಂತರ್ಜಾಲವನ್ನೆಲ್ಲ ಜಾಲಾಡಿ ಸಧ್ಯದಲ್ಲೇ ಒಂದಿಷ್ಟು links ಕೊಡುವ ಯೋಚನೆ ಇದೆ. ನಿಮ್ಮಲ್ಲಿ ಯಾರಿಗಾದರೂ ಮಕ್ಕಳಿಗೆ ಸಂಬಂಧಿಸಿದ ಕನ್ನಡದಲ್ಲಿರುವ ವೆಬ್ ತಾಣಗಳು ಗಮನಕ್ಕೆ ಬಂದಲ್ಲಿ ದಯವಿಟ್ಟು ಇಲ್ಲಿ ಹಂಚಿಕೊಳ್ಳಿ.
ಸಮಯ ಸಿಕ್ಕಾಗ, ಮೂಡ್ ಬಂದಾಗ ಅಂತ ಅಪ್ಡೇಟ್ ಆಗಲು ನೂರಾರು ನೆಪಗಳನ್ನಿಟ್ಟುಕೊಂಡಿರುವ ಈ 'ನಿಶುಮನೆ'ಯಂತಲ್ಲದೆ, ಸಾಕಷ್ಟು active ಆದ ಒಂದಿಷ್ಟು ಮಕ್ಕಳ ಬ್ಲಾಗುಗಳು ಕನ್ನಡದಲ್ಲಿ ಶುರುವಾದರೆ ಚೆನ್ನಾಗಿರತ್ತಲ್ಲ ಅನ್ನಿಸುತ್ತಿರುವಾಗಲೇ,
'ನಂದಗೋಕುಲ'ವೊಂದು ಬಾಗಿಲು ತೆರೆದಿದೆ. ಈಗಾಗಲೇ 'ಚಿತ್ರದುರ್ಗ'ದಂತ ಸುಂದರ, ಚಟುವಟಿಕೆಯ ಬ್ಲಾಗಿನ ಒಡತಿಯಾಗಿದ್ದ ನನ್ನ ಪ್ರೀತಿಯ ಗೆಳತಿ, ಈಗ ಪುಟಾಣಿ ಅಮರ್ತ್ಯನನ್ನ ಕಂಕುಳಲ್ಲಿ ಎತ್ತಿಕೊಂಡೆ ಅವನಿಗೆ ಒಂದು ಬ್ಲಾಗ್ ಮಾಡಿದ್ದಾಳೆ. ಅವಳ ಕಣಜದಲ್ಲಿರೋ ನೂರಾರು ಕನ್ನಡ, ಇಂಗ್ಲಿಷ್ ಸರಕುಗಳು ನಂದಗೋಕುಲದ ಮೂಲಕ ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲರಿಗೂ ಸಿಗುವಂತಾಗಲಿ ಮತ್ತು ಹಾಗಾಗಲು ಈ ನಂದಗೋಕುಲದ ಕೃಷ್ಣ ಅವನ ಅಮ್ಮನಿಗೆ ಸಾಕಷ್ಟು ಸಮಯ, ಸ್ಪೂರ್ತಿ ಕರುಣಿಸಲಿ ಅಂತ ಪ್ರೀತಿಯಿಂದ ಹಾರೈಸುತ್ತಾ......

ಅಂದ ಹಾಗೆ ಮಕ್ಕಳಿಗೆ ಕನ್ನಡವನ್ನೇ ಆಗಲಿ, ಇನ್ನೇನನ್ನೇ ಆಗಲಿ ಕಲಿಯೋ ಆಸಕ್ತಿ ಬರಿಸೋದು ಹ್ಯಾಗೆ? ನಾನು ಮಾಡಿದ್ದು ಹೀಗೆ: ನಿಶು ಸಣ್ಣ ಮಗುವಿದ್ದಾಗಿನಿಂದ ಅವನಿಗಂತ ಹಾಡುತ್ತಿದ್ದ ಹಾಡುಗಳಲ್ಲಿ English, ಕನ್ನಡ ವರ್ಣಮಾಲೆಯನ್ನೂ ಸೇರಿಸಿಕೊಳ್ತಿದ್ದೆ. ಇದ್ದಕ್ಕಿದ್ದಂತೆ ಒಂದು ದಿನ ತಾನಾಗೆ ನನ್ನ ಜೊತೆ ಹಾಡಲಿಕ್ಕೆ ಶುರು ಮಾಡಿದ ನಿಶು, ೧೩-೧೪ ತಿಂಗಳ ಮಗುವಿರುವಾಗಲೇ ಎಲ್ಲಾ English-ಕನ್ನಡ ಅಕ್ಷರಗಳನ್ನೂ ಹಾಡುತ್ತಿದ್ದ. Of-course, ಈಗಲೂ 'ರ' ಹೊರಳದ ಅವನ ನಾಲಿಗೆಯಲ್ಲಿ ಯರಲವ, ಯಲಲವ ಆಗೇ ನಲಿಯೋದು. ಕೆಲವೊಮ್ಮೆ ಅದು ಯಲವಲ-ವೂ ಆಗಿ, ಹಾಗೆ ಆದಾಗಲೆಲ್ಲ 'ಅಯ್ಯೊ ಈ ಕನ್ನಡ ಅಕ್ಷರ ಮಾಲೆ ಎಷ್ಟು ಮುದ್ದಾಗಿದೆಯಲ್ಲ' ಅನ್ನಿಸಿ, ನಿಶುವಿನ ಮೇಲೂ, ಕನ್ನಡದ ಮೇಲೂ ಒಟ್ಟೊಟ್ಟಿಗೇ ಮುದ್ದು ಉಕ್ಕಿ ಬರುವುದೂ ಉಂಟು.



ನೀವು ನಂಬ್ತೀರೋ ಇಲ್ವೋ ಗೊತ್ತಿಲ್ಲ, ನಿಶೂಗೆ ಕನ್ನಡ ಕಾಗುಣಿತ ಯಾರೂ ಹೇಳಿ ಕೊಟ್ಟಿದ್ದಲ್ಲ. ಒಂದೇ ಒಂದು ಬಾರಿ ನಾನು 'ಕ' ಅಕ್ಷರದ ಕಾಗುಣಿತ 'ಹಾಡಿ' ತೊರಿಸಿದ್ದು. ಅದಕ್ಕೂ ಅ ಆ ಇ ಈ ಸ್ವರಗಳಿಗೂ ಇರುವ ಸಾಮ್ಯ ಗುರುತಿಸಿ ಬೇರೆಲ್ಲ ವ್ಯಂಜನಾಕ್ಷರಗಳಿಗೂ ಅದನ್ನ apply ಮಾಡಿದ್ದು ಈ ಚಿಲ್ಟೂನೇ, ಅದೂ ೨ ವರ್ಷ ತುಂಬುವ ಮುಂಚೆಯೇ! ಮಕ್ಕಳ beautiful, unbelievable mind ಬಗ್ಗೆ ನಿಮಗೆ ಗೊತ್ತಿದ್ದರೆ, ನೀವಿದನ್ನ ನಂಬ್ತೀರ..ನನಗೆ ಗೊತ್ತು.