Sunday, November 11, 2007

ಕಥೆ : ರಾಜನ ಕಷ್ಟ

ಮಕ್ಕಳ ಕಥೆಗಳು ಹೇಗಿರಬೇಕು? ನೀತಿ ಬೋಧಿಸಲೆಂದೇ ಅದಕ್ಕೊಂದು ಕಥೆ ಹೆಣೆದು, ನೀತಿಯ ಭಾರದಿಂದ ಜಗ್ಗುವ ಕಥೆಗಳು ತೀರಾ ಪುಟ್ಟ ಮಕ್ಕಳಿಗೆ ಬೇಕ? ಅಥವ ಸುಮ್ಮನೆ ಅವರ ಕುಥೂಹಲ ಕೆರಳಿಸುವ, ಕಣ್ಣು ಅರಳಿಸುವ, ಕಲ್ಪನೆ ಗರಿಗೆದರಿಸುವ, ನಿರ್ದಿಷ್ಟ ನಿಯಮ, ಬಂಧ ಯಾವುವೂ ಇರದ ಕಥೆಗಳು ಬೇಕ? ನನಗೇನೋ ಈ ಎರಡನೆ ಮಾದರಿಯವೇ ಇಷ್ಟ. ಅದರಲ್ಲೂ ನಾನು ಹೇಳುವ ಕಥೆಗಳಲ್ಲಿ, ನಿಶುವನ್ನೇ ಒಂದು ಪಾತ್ರವಾಗಿಸಿ, ಅವನು ಆಡುವಂಥದ್ದೇ ಮಾತುಗಳನ್ನ ಹಾಕಿ, ಕಥೆ ಕೇಳುವಾಗ ಚೂರೇ ಬಿಡುವ ಅವನ ಬಾಯಿ, ಅರಳುವ ಅವನ ಕಣ್ಣು, ಮುಖ ನೋಡುತ್ತ, ಕಥೆಯನ್ನ ಇನ್ನೂ ಇನ್ನೂ 'ಸಿಲ್ಲಿ'ಯಾಗಿಸುತ್ತಾ, ಅವನನ್ನ ನಗಿಸುತ್ತಾ ಹೋಗೋದು ಅಂದರೆ ನನಗೆ ತುಂಬಾ ಇಷ್ಟ. ಅಂತ ಒಂದು ಕಥೆ ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ....




ರಾಜನ ಕಷ್ಟ




ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೆ ಮೂರು ಜನ ಮಕ್ಕಳು. ಮೊದಲನೆ ಮಗು ಹೆಸ್ರು 'ನಿ' ಅಂತ. ಎರಡನೆ ಮಗು 'ಶಾಂ', ಮೂರನೇ ಮಗು, 'ತ್'. ಮೂರೂ ಮಕ್ಕಳನ್ನೂ ಒಟ್ಟಿಗೇ ಕರೆಯುವಾಗ ಆ ರಾಜ ಅವರ ಹೆಸರನ್ನೆಲ್ಲ ಒಟ್ಟಿಗೆ ಸೇರಿಸಿ 'ನಿಶಾಂತ್.....' ಅಂತ ಕೂಗ್ತಿದ್ದ. ಹಾಗೆ ಅವನು ಕೂಗಿದಾಗೆಲ್ಲ 'ನಿ', 'ಶಾಂ', 'ತ್' ಮೂರೂ ಮಕ್ಕಳೂ ಓಡಿ ಓಡಿ ಬರ್ತಿದ್ರು. ಜೊತೆಗೆ ಈ 'ನಿಶಾಂತ್' ಕೂಡ ಓಡಿ ಹೋಗಿ ರಾಜನ ಮುಂದೆ ನಿಂತುಬಿಡ್ತಿದ್ದ. ರಾಜ ಇವನನ್ನ ನೋಡಿ ಕೇಳ್ತಿದ್ದ,
'ನಾನು ಕರೆದಿದ್ದು ನನ್ನ ಮಕ್ಕಳನ್ನ. ನೀನ್ಯಾಕಪ್ಪ ಬಂದೆ?'
ಅದಕ್ಕೆ ನಿಶಾಂತ್ ಹೇಳ್ತಿದ್ದ,
'ಮತ್ತೆ ನೀವು ನಿಶಾಂತ್ ಅಂತ ಕೂಗಿ ಕರೆದ್ರಲ್ಲ, ಅದು ನನ್ನ ಹೆಸ್ರು. ನೀವು ಹಾಗೆ ಕರೆದಿದ್ದಕ್ಕೆ ಬಂದೆ'.
ಪ್ರತಿ ಸಲವೂ ಹೀಗೇ ಆಗ್ತಿತ್ತು. ರಾಜ ಅವನ ಮಕ್ಕಳನ್ನ ಒಟ್ಟಿಗೆ ಕೂಗಿ ಕರೆದಾಗೆಲ್ಲ, ಆ ಮೂರು ಮಕ್ಕಳ ಜೊತೆ ನಿಶಾಂತ್ ಕೂಡ ಹೋಗಿ ನಿಂತು ಬಿಡ್ತಾನೆ. ಕೇಳಿದ್ರೆ,
'ನೀವು ನನ್ನ ಹೆಸ್ರನ್ನೇ ತಾನೆ ಕೂಗಿದ್ದು' ಅಂತಾನೆ.
ರಾಜನಿಗೆ ದೊಡ್ಡ ಪಜೀತಿ. ಅವನಿಗೆ ಹೀಗಾದಾಗಲೆಲ್ಲ ಏನ್ ಮಾಡಬೇಕು ಅಂತ ಗೊತ್ತಾಗ್ದೆ ತಲೆ ಮೇಲೆ ಕೈ ಹೊತ್ತು ಕುಳಿತು ಬಿಡ್ತಾನೆ. ಆ ದೊಡ್ಡ ರಾಜನ ಪಜೀತಿ ನೋಡಿ ಈ ನಾಲ್ಕು ಮಕ್ಕಳಿಗೂ ಜೋರಾಗಿ ನಗು ಬಂದು ಬಿಡತ್ತೆ. ಜೋರಾಗಿ ನಗ್ತಾ, ಹೋ ಅಂತ ಕೂಗ್ತ ಈ ಮಕ್ಕಳೆಲ್ಲ ಆ ರಾಜನ ಅರಮನೆಯೊಳಗೆಲ್ಲ ಗಲಾಟೆ ಮಾಡ್ಕೊಂಡು ಆಟ ಆಡೋಕೆ ಶುರು ಮಾಡ್ತಾರೆ.
- - - - - - - - - - - - - - - - - - - - - - - - - - -
ಈ ಕಥೆ ಬರೆಯುವಾಗ ನನಗೆ ಕನ್ನಡದಲ್ಲಿ ೩ ಎಂಬುದನ್ನ ಅಕ್ಷರದಲ್ಲಿ ಬರೆಯೋದಕ್ಕಾಗ್ದೆ ಸಾಕಷ್ಟು ಒದ್ದಾಡಿದ್ದಾಯ್ತು. ಕಡೆಗೂ 'ಮೂರು' ಅಂತಲೇ ಟೈಪ್ ಮಾಡಬೇಕಾಯ್ತು. ಬರಹದಲ್ಲಿ ಸರಿಯಾಗಿ ಬರೆಯೋಕ್ಕಾದ್ರೂ ಅದನ್ನ ಬ್ಲಾಗ್-ಗೆ ಹಾಕುವಾಗ ಪ್ರತಿಬಾರಿಯೂ 'ಮೂರು' ಅಂತಲೇ ಬರ್ತಿದೆ. ಓದುವಾಗ ನೀವು ಸರಿಯಾಗಿ ಓದಿಕೊಂಡುಬಿಡಿ ಮತ್ತು ನಿಮಗೆ ಯಾರಿಗಾದರೂ ಇದನ್ನ ಹ್ಯಾಗೆ ಸರಿ ಮಾಡೋದು ಗೊತ್ತಿದ್ರೆ ದಯವಿಟ್ಟು ತಿಳಿಸಿಕೊಡಿ.
'ಮೂ' ಸರಿ ಹೋಯ್ತು!
ಈ ಪೋಸ್ಟ್ ಹಾಕಿದ ೨೪ ಘಂಟೆ ಒಳಗೇ ನನಗೆ 'ಮೂ' ಸಮಸ್ಯೆಗೆ ಪರಿಹಾರ ಸಿಕ್ಕಿಬಿಡ್ತು. ಕನ್ನಡ ಬ್ಲಾಗಿಗರು ಎಷ್ಟು active-ಆಗಿ ಇದ್ದಾರಲ್ಲ ಅನ್ನಿಸಿ ತುಂಬಾ ಖುಷಿ ಆಗ್ತಿದೆ. ಅದಕ್ಕೆ ದಿನೇ ದಿನೇ ಕನ್ನಡ ಅರಳಿಕೊಳ್ತಾ ಇದೆ, ವೆಬ್ ಲೋಕದಲ್ಲಿ. ಪರಿಹಾರ ಸೂಚಿಸಿದ ಶ್ರೀ, ಸುಶ್ರುತ ಇಬ್ಬರಿಗೂ ತುಂಬಾ ಥ್ಯಾಂಕ್ಸ್.
- - - - - - - - - - - - - - - - - - - - - - - - - - - - - - - - - -
ನಿಶೂಗೆ ತುಂಬಾ ಇಷ್ಟವಾದ ಕಥೆಯೊಂದು ಇಲ್ಲಿದೆ. ನೀವೂ ನೋಡಿ.










7 comments:

Sree said...

ಹ್ಹ ಹ್ಹ! ಚೆನ್ನಾಗಿದೆ ಕಥೆ!:) ನಾನು ಚಿಕ್ಕವ್ಳಿದ್ದಾಗ ನಮ್ಮಮ್ಮ ಇದೇ ಥರ ಕಥೆ ಹೇಳ್ತಿದ್ರು. ಕಥೆನಲ್ಲಿ ನನ್ನ್ ಹೆಸ್ರು ಸೇರ್ಸಿದ್ದ್ ತಕ್ಷಣ ಸುಳ್ಳ್ ಕಥೆ ಹೇಳ್ತೀಯ ಅಂತ ಅಮ್ಮನ ಮೇಲೆ ಕೋಪ ಮಾಡ್ಕೊಂಡ್ಬಿಡ್ಟಿದ್ದೆ ನಾನು!:)) ಅಂಧಾಗೆ ನಿಮ್ಮ ಮೂರು ಸಮಸ್ಯೆ ಡಿಸ್ಪ್ಲೇದು. ನನಗೆ ಇಲ್ಲಿ ಸರೀಗೇ ಕಾಣ್ತಿದೆ. ಕೆಲವ್ ದಿನಘಾಳ್ ಹಿಂದಿನ್ ವರೆಗೆ ನನ್ನ್ ಸಿಸ್ಟಂನಲ್ಲೂ ಈ ಸಮಸ್ಯೆ ಇತ್ತು. ಕೆಳಗಿನ್ ಲಿಂಕ್ ಗೆ ಹೋಗಿ ಇನ್ಸ್ಟಾಲ್ ಮಾಡಿ, ಸರಿಯಾಗುತ್ತೆ: Install this to fix your 'moo' problem. :)


http://www.microsoft.com/downloads/details.aspx?familyid=3fa7cdd1-506b-4ca0-bd47-b338e337a527&displaylang=en&displaylang=en#Overview

Sushrutha Dodderi said...

Its a problem with Windows XP. Install this patch to fix this problem:

http://www.microsoft.com/downloads/details.aspx?familyid=3fa7cdd1-506b-4ca0-bd47-b338e337a527&displaylang=en&displaylang=en#Overview

nishu mane said...

ಶ್ರೀ, ಸುಶ್ರುತ,
ನನ್ನ'ಮೂ' ಸರಿ ಮಾಡಿದ್ದಕ್ಕೆ ಮತ್ತು ಅಷ್ಟು ಬೇಗ ಕಾಮೆಂಟ್ ಕಳಿಸಿದ್ದಕ್ಕೆ ಡಬ್ಬಲ್ ಡಬ್ಬಲ್ ಥ್ಯಾಂಕ್ಸ್ ನಿಮ್ಮಿಬ್ರಿಗೂ.

ಶ್ರೀ, ಸಧ್ಯಕ್ಕಂತೂ ನಿಶೂಗೆ ಅವನನ್ನ ಸೇರಿಸಿ ಹೆಣೆಯೋ ಕಥೆಗಳು ಇಷ್ಟ ಆಗ್ತಿವೆ. ನಿಮ್ಮ ಹಾಗೆ ಯಾವಾಗ ಕೋಪ ಮಾಡ್ಕೊಂಡು ಬಿಡ್ತಾನೋ ಗೊತ್ತಿಲ್ಲ. ಹಾಗೆ ಅವನು ಕೋಪ ಮಾಡಿಕೊಂಡ್ರೆ, ಸುಳ್ಳಿಲ್ಲದ ಕಥೆ ಹೇಳೋಕೆ ನಾನು ನಿಮ್ಮನ್ನೇ ಕೇಳ್ತೀನಿ ಆಯ್ತಾ? ನಿಮ್ಮೊಮ್ಮ ಹೇಳಿದ ಕಥೆಗಳೆಲ್ಲ ನಿಮಗೆ ನೆನಪಿವೆ ತಾನೆ?

ಮೀರ.

Anonymous said...

ಹೇ ಮೀರಾ ಕಥೆ ಬೊಂಬಾಟಾಗಿದೆ
ನಾನು ಅ-ಮ-ರ್ತ್ಯ ಅಂತಾ ನಿನ್ನ ಐಡಿಯಾ ಕದ್ದು ಮುಂದೆ ಯಾವಾಗಾದ್ರೂ ಕಥೆ ಹೇಳೋಣಾ ಅನ್ನಿಸಿತು...
-ಮಾಲಾ

nishu mane said...

ಮಾಲಾ, ನನ್ನ ಐಡಿಯಾ ಕದಿಯುವಷ್ಟು ಚೆನ್ನಾಗಿದೆ ಅಂತ ನಿನಗನ್ನಿಸಿದ್ದಕ್ಕೆ ಖುಷಿ ಆಗ್ತಿದೆ. ನಾನು ಇಲ್ಲಿ ಹಂಚಿಕೊಳ್ಳೋ ಐಡಿಯಾಗಳನ್ನ ನನ್ನ ಬ್ಲಾಗಿಗೆ ಬರುವವರುಕದ್ದು, customize ಮಾಡಿ, ಮಕ್ಕಳಿಗೆ ಕೊಟ್ಟರೆ ನನ್ನ ಐಡಿಯಾಗಳೆಲ್ಲ ಸಾರ್ಥಕವಾದಂತೇ.

-ಮೀರ.

Jagali bhaagavata said...

ಕಥೆ ಚೆನ್ನಾಗಿದೆ. ಕಥೆಗಳಿರುವುದು ಕುತೂಹಲವನ್ನ ಕೆರಳಿಸುವುದಕ್ಕೆ, ಕಲ್ಪನೆಗೆ ಗರಿಗೊಡುವುದಕ್ಕೆ, ಪ್ರಶ್ನೆಗಳನ್ನ ಹುಟ್ಟುಹಾಕುವುದಕ್ಕೆ. ತುಂಬ ಶಕ್ತಿಶಾಲಿ, ಪರಿಣಾಮಕಾರಿ ಉಪಕರಣ ಅದು. ನೀತಿಬೋಧೆಗೆ ಕಥೆಗಳನ್ನ ಆಯ್ದುಕೊಂಡಿದ್ದು ಅದಕ್ಕೆ ಇರಬೇಕು. ಕಥೆಗಳ ಹಲವು ಸಾಧ್ಯತೆಗಳಲ್ಲಿ ನೀತಿಬೋಧೆಯೂ ಒಂದು. ಆದರೆ ಅದೊಂದೆ ಅಲ್ಲ:-) ನಿಮ್ಮ ಮಾತು ಒಪ್ಪಿದೆ.

nishu mane said...

ಹೌದು ಭಾಗವತರೆ, ನಿಮ್ಮ ಮಾತು ನಾನೂ ಒಪ್ಪಿದೆ. ಕನ್ನಡದಲ್ಲಿ ಇರುವ ಕೆಲವು ಮಕ್ಕಳ ಪುಸ್ತಕಗಳಲ್ಲಿ, ಅದರಲ್ಲೂ ಈ ನೀತಿ ಕಥೆಗಳ ಪುಸ್ತಕಗಳಲ್ಲಿ ಬಳಸಿರೋ ಭಾಷೆ ಬಗ್ಗೆ ನನಗೆ ತುಂಬಾ ಅಸಮಾಧಾನ ಇದೆ. ಕನ್ನಡವೇ ಅಲ್ಲವೇನೋ ಅನ್ನೋ ಅಷ್ಟು ಕೃತಕವಾಗಿ ನಿರೂಪಿತವಾಗಿರೋ ಕಥೆಗಳನ್ನ ನಿಶುವಿನಂತ ಪುಟ್ಟ ಮಕ್ಕಳಿಗೆ ಆಸಕ್ತಿ ಬರುವಂತೆ ಹೇಳೋದು ಹ್ಯಾಗೆ ಅನ್ನೋದು ನನ್ನ ಪ್ರಶ್ನೆ. ಸ್ವಲ್ಪ ದೊಡ್ಡ ಮಕ್ಕಳಿಗೆ ಕಥೆ ಓದುವಾಗ ಇದು ಅಂಥಾ ತೊಂದರೆ ಅನ್ನಿಸಲ್ವೇನೋ. ಹೀಗೇ ಬಂದು ಕಾಮೆಂಟಿಸುತ್ತಿರಿ.

ಮೀರ.